ಕುಸಿದುಬಿದ್ದು ರಾಜ್ಯಮಟ್ಟದ ವಾಲಿಬಾಲ್ ಆಟಗಾರ ಮೃತ್ಯು

ಕಾಪು, ಮಾ.೨೯- ಮೈದಾನದಲ್ಲಿ ಆಟವಾಡುತ್ತಿದ್ದಂತೆ ಕುಸಿದು ಬಿದ್ದು ರಾಜ್ಯಮಟ್ಟದ ವಾಲಿಬಾಲ್ ಆಟಗಾರನೋರ್ವ ಮೃತಪಟ್ಟ ಘಟನೆ ಕಾಪು ಸಮೀಪದ ಇನ್ನಂಜೆ ಮೈದಾನದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಇಲ್ಲಿನ ಕುರ್ಕಾಲು ಸುಭಾಸ್ ನಗರ ನಿವಾಸಿ ದೇವು ಯಾನೆ ದೇವರಾಜ್ ಅಂಚನ್(೩೩) ಮೃತಪಟ್ಟವರು. ರಾಜ್ಯ ಮಟ್ಟದ ಹಲವಾರು ತಂಡಗಳಲ್ಲಿ ಆಟಗಾರನಾಗಿ ಆಡಿರುವ ಇವರು ಶನಿವಾರ ರಾತ್ರಿ ಇನ್ನಂಜೆ ಮೈದಾನದಲ್ಲಿ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಆಟವಾಡುತ್ತಿದ್ದರು. ರಾತ್ರಿ ಒಂದು ಗಂಟೆ ಸುಮಾರಿಗೆ ಇವರು ಆಟವಾಡುತ್ತಿದ್ದ ವೇಳೆ ಹೃದಯಾಘಾತಕ್ಕೀಡಾಗಿ ಏಕಾಏಕಿ ಕುಸಿದು ಬಿದ್ದರೆನ್ನಲಾಗಿದೆ. ಕೂಡಲೇ ಅವರನ್ನು ಉಡುಪಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು. ಅವಿವಾಹಿತರಾಗಿದ್ದ ದೇವರಾಜ್ ನಾಲ್ಕು ತಿಂಗಳ ಹಿಂದೆಯಷ್ಟೇ ತಂದೆಯನ್ನು ಕಳೆದುಕೊಂಡಿದ್ದರು.