ಕುಷ್ಠರೋಗಿಗಳಿಗೆ ಉಚಿತ ಚಿಕಿತ್ಸೆ: ಡಾ. ನಾಗೂರೆ ಘೋಷಣೆ

ಬೀದರ್: ಫೆ.22:ಪ್ರಧಾನಿ ನರೇಂದ್ರ ಮೋದಿ ಅವರ ಕುಷ್ಠರೋಗ ಮುಕ್ತ ಭಾರತ ಅಭಿಯಾನಕ್ಕೆ ಕೈಜೋಡಿಸಿರುವ ಇಲ್ಲಿಯ ಪ್ರಸಿದ್ಧ ಚರ್ಮರೋಗ ತಜ್ಞ ಡಾ. ಅಶೋಕಕುಮಾರ ನಾಗೂರೆ ಅವರು ಕುಷ್ಠರೋಗಿಗಳಿಗೆ ಉಚಿತ ಚಿಕಿತ್ಸೆ ಕೊಡುವುದಾಗಿ ಘೋಷಿಸಿದ್ದಾರೆ.

ಕುಷ್ಠರೋಗ ವಾಸಿ ಆಗುವವರೆಗೂ ರೋಗಿಗಳ ತಪಾಸಣೆ ಸಂಪೂರ್ಣ ಉಚಿತವಾಗಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ದೇಶವನ್ನು ಕುಷ್ಠರೋಗದಿಂದ ಮುಕ್ತಗೊಳಿಸಲು ಸಂಕಲ್ಪ ತೊಟ್ಟು, ಪ್ರಧಾನಿ ಅಭಿಯಾನ ಶುರು ಮಾಡಿದ್ದಾರೆ. ವೈದ್ಯರು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೈಜೋಡಿಸಿದ್ದಲ್ಲಿ ಅವರ ಆಶಯ ಬಹು ಬೇಗ ಈಡೇರಲಿದೆ. ಹೀಗಾಗಿ ಅಭಿಯಾನದ ಭಾಗವಾಗಿ ಕುಷ್ಠರೋಗಿಗಳಿಗೆ ಉಚಿತ ಚಿಕಿತ್ಸೆ ಕೊಡಲು ಆರಂಭಿಸಿದ್ದೇನೆ ಎಂದು ಹೇಳಿದ್ದಾರೆ.

ಬೀದರ್ ಜಿಲ್ಲೆ ಮಾತ್ರವಲ್ಲದೆ, ನೆರೆ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳ ರೋಗಿಗಳೂ ಉಚಿತ ಚಿಕಿತ್ಸೆಯ ಪ್ರಯೋಜನ ಪಡೆಯಬಹುದು. ಮಾನವೀಯ ನೆಲೆಯಲ್ಲಿ ಹಿಂದೆಯೂ ಅನೇಕ ಕುಷ್ಠರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದ್ದೇನೆ. ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಬಾಲಾಜಿ ಸ್ಕಿನ್ ಕೇರ್ ಸೆಂಟರ್‍ನ ಮುಖ್ಯಸ್ಥರೂ ಆದ ಅವರು ತಿಳಿಸಿದ್ದಾರೆ.

ಕುಷ್ಠ ರೋಗ ಶಾಪ ಅಲ್ಲ. ನಿಯಮಿತ ಚಿಕಿತ್ಸೆ ಪಡೆದರೆ ಸಂಪೂರ್ಣ ವಾಸಿಯಾಗಲಿದೆ. ಕಾರಣ, ಕುಷ್ಠ ರೋಗಿಗಳು ಭಯಪಡಬಾರದು. ಯಾವುದೇ ಸಂಕೋಚವಿಲ್ಲದೆ, ಚಿಕಿತ್ಸೆಗೆ ಮುಂದೆ ಬರಬೇಕು. ಈ ಮೂಲಕ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರವನ್ನು ಕುಷ್ಠರೋಗದಿಂದ ಮುಕ್ತಗೊಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ವೈದ್ಯರಿಗೆ ಕೃತಜ್ಞತೆ: ಬಾಲಾಜಿ ಸ್ಕಿನ್ ಕೇರ್ ಸೆಂಟರ್‍ನಲ್ಲಿ ಕುಷ್ಠರೋಗದ ಉಚಿತ ತಪಾಸಣೆ ಮಾಡಿಸಿಕೊಂಡ ನೆರೆಯ ತೆಲಂಗಾಣದ ವಿಷ್ಣು, ಕಲಬುರಗಿ ಜಿಲ್ಲೆಯ ಸಂತೋಷ ಅವರು ಡಾ. ನಾಗೂರೆ ಅವರಿಗೆ ಕೃತಜ್ಞತೆ ಸಲ್ಲಿಸಿದರು.