ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರು ಹೇಳಿಕೆ – ವಾಟ್ಸಾಪ್‌ಗಳಲ್ಲಿ ವೈರಲ್

ವಿಧಾನ ಪರಿಷತ್ ಚುನಾವಣೆ : ಮುಂದುವರೆದ, ಹಿಂದುಳಿದ ರಾಜಕೀಯ ಸಂಘರ್ಷ

 • ರಾಯಚೂರು.ಡಿ.೦೪- ‘ಒಬ್ಬ ಲಿಂಗಾಯತರು ಮನಸು ಮಾಡಿದರೇ, ಇತರೆ ಜಾತಿಯ ೧೦ ಜನರನ್ನು ವೋಟು ಹಾಕಿಸುತ್ತಾರೆ. ಆದರೆ, ೧೦ ಜನ ಇತರೆ ಜಾತಿಯವರು ಸೇರಿದರೂ, ಒಬ್ಬ ಲಿಂಗಾಯತ ಮತವನ್ನು ಹಾಕಿಸಲು ಸಾಧ್ಯವಿಲ್ಲ‘.
  ಬಯ್ಯಾಪೂರು ಅಮರೇಗೌಡ ಅವರ ಭಾಷಣದ ವಿಡಿಯೋ ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರೀ ವೈರಲಾಗಿದೆ. ಬಯ್ಯಾಪೂರು ಅಮರೇಗೌಡ ಅವರು ಯಾವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದರೂ ಎನ್ನುವುದು ಸ್ಪಷ್ಟವಾಗಿಲ್ಲದಿದ್ದರೂ, ಸುಮಾರು ೧೨ ಸೆಕೆಂಡಗಳ ಈ ಹೇಳಿಕೆಯ ವಿಡಿಯೋ ವಿಧಾನ ಪರಿಷತ್ ಚುನಾವಣೆಯಲ್ಲಿ ಬಳಸಲಾಗುತ್ತಿದೆ. ಪರಿಷತ್ ಚುನಾವಣೆಗೆ ಕಾಂಗ್ರೆಸ್, ಬಿಜೆಪಿಯಿಂದ ಸ್ಪರ್ಧಿಸಿದ ಇಬ್ಬರು ಅಭ್ಯರ್ಥಿಗಳು ಭಿನ್ನ ವರ್ಗಕ್ಕೆ ಸೇರಿದವರಾಗಿದ್ದಾರೆ. ಕುಷ್ಟಗಿ ಶಾಸಕ ಬಯ್ಯಾಪೂರು ಅಮರೇಗೌಡ ಅವರ ಸಂಬಂಧಿ ಶರಣಗೌಡ ಬಯ್ಯಾಪೂರು ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
  ಮತ್ತೊಂದು ಕಡೆ ಹಿಂದುಳಿದ ವರ್ಗಕ್ಕೆ ಸೇರಿದ ಬಿಜೆಪಿ ಅಭ್ಯರ್ಥಿಯಾಗಿ ವಿಶ್ವನಾಥ ಇವರು ಕಣದಲ್ಲಿದ್ದಾರೆ. ಶರಣಗೌಡ ಬಯ್ಯಾಪೂರು ಅವರು ಮುಂದುವರೆದ ವರ್ಗಕ್ಕೆ ಸೇರಿದರೇ, ಬಿಜೆಪಿಯ ಅಭ್ಯರ್ಥಿ ವಿಶ್ವನಾಥ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಈ ಉಭಯರ ಸ್ಪರ್ಧೆಯಿಂದಾಗಿ ವಿಧಾನ ಪರಿಷತ್ ಚುನಾವಣೆ ಮತ್ತು ಮುಂದುವರೆದ ಮತ್ತು ಹಿಂದುಳಿದ ವರ್ಗಗಳ ಚುನಾವಣಾ ಕಣವಾಗಿದೆ. ಈ ಚುನಾವಣೆಯಲ್ಲಿ ಮತಗಳನ್ನು ಪಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ವರ್ಗ ರಾಜಕೀಯವನ್ನು ತೀವ್ರಗೊಳಿಸಿದೆ.
  ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ, ಪಂಗಡ ವರ್ಗದ ಮತಗಳನ್ನು ತಮ್ಮತ್ತ ಪಡೆಯಲು ಬಿಜೆಪಿ ತೀವ್ರ ಪ್ರಯತ್ನ ನಡೆಸಿದರೇ, ಕಾಂಗ್ರೆಸ್ ಮುಂದುವರೆದ ಸಮುದಾಯಗಳೊಂದಿಗೆ ಹಿಂದುಳಿದ ವರ್ಗದ ಮತಗಳನ್ನು ಪಡೆಯಲು ಶತಪ್ರಯತ್ನ ನಡೆಸಿದೆ. ಈ ಪ್ರಕ್ರಿಯೆಯಲ್ಲಿ ಹಿಂದುಳಿದ ಮತ್ತು ಮುಂದುವರೆದ ರಾಜಕೀಯ ಪೈಪೋಟಿ ಪರಿಷತ್ ಚುನಾವಣೆಯಲ್ಲಿ ತೀವ್ರಗೊಳ್ಳಲು ಕಾರಣವಾಗಿದೆ. ಶಾಸಕ ಅಮರೇಗೌಡ ಬಯ್ಯಾಪೂರು ಅವರ ಹೇಳಿಕೆಯ ವಿಡಿಯೋವನ್ನು ವೈರಲ್ ಮಾಡುವ ಮೂಲಕ ಹಿಂದುಳಿದ ವರ್ಗದವರ ಮಧ್ಯೆ ಮತ ಧ್ರುವೀಕರಣ ಪ್ರಕ್ರಿಯೆ ತೀವ್ರಗೊಂಡಿದೆ.
  ವಿಧಾನ ಪರಿಷತ್ ಚುನಾವಣೆ ಮತದಾನ ದಿನಾಂಕ ಹತ್ತಿರವಾಗುತ್ತಿದ್ದಂತೆ ಚುನಾವಣೆಯಲ್ಲಿ ಎಲ್ಲಾ ತಂತ್ರಗಳನ್ನು ಬಳಸಲಾಗುತ್ತಿದೆ. ಈಗ ಆಯಾ ಪಕ್ಷಗಳ ನಾಯಕರ ಹೇಳಿಕೆಗಳನ್ನು ಹುಡುಕುವ ಮೂಲಕ ವೈರಲ್ ಮಾಡುವುದರೊಂದಿಗೆ ಚುನಾವಣಾ ಗೆಲುವಿಗೆ ಪ್ರಯತ್ನಗಳು ನಡೆಸಿದ್ದಾರೆ. ಅಮರೇಗೌಡ ಬಯ್ಯಾಪೂರು ಅವರ ಹೇಳಿಕೆಯನ್ನು ಈಗ ತೀವ್ರ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಪ್ರಯತ್ನಗಳು ನಡೆದಿವೆ. ಲಿಂಗಾಯತಿತೇತರ ಜಾತಿಗಳ ಮತ ಧ್ರುವೀಕರಣಕ್ಕೆ ವಾಟ್ಸಾಪ್‌ಗಳಲ್ಲಿ ಬಯ್ಯಾಪೂರು ಅವರ ಹೇಳಿಕೆ ವಿಡಿಯೋವನ್ನು ವ್ಯಾಪಕವಾಗಿ ಹರಿ ಬಿಡಲಾಗಿದೆ.
  ವಿಧಾನ ಪರಿಷತ್ ಚುನಾವಣೆಯಲ್ಲಿ ಒಂದೆಡೆ ಗ್ರಾ.ಪಂ.ಸದಸ್ಯರಿಗೆ ಹಣದ ಆಮೀಷವೊಡ್ಡುವ ಪ್ರಯತ್ನಗಳು ನಡೆದಿರುವಾಗಲೇ ಮತ್ತೊಂದು ಕಡೆ ವರ್ಗ ಆಧಾರಿತ ಮತಗಳು ಪಡೆಯುವ ತಂತ್ರ ನಡೆದಿದೆ. ಕಾಂಗ್ರೆಸ್, ಬಿಜೆಪಿಯ ಉಭಯ ಸದಸ್ಯರು ಪ್ರತ್ಯೇಕ ವರ್ಗಗಳಿಗೆ ಸೇರಿದ್ದರಿಂದ ಈ ಚುನಾವಣೆ ಹಿಂದುಳಿದ ಮತ್ತು ಮುಂದುವರೆದ ರಾಜಕೀಯ ಸಂಘರ್ಷ ಸ್ವರೂಪ ಪಡೆದುಕೊಂಡಿದೆ. ಚುನಾವಣೆಗೆ ಇನ್ನೂ ಐದೇ ದಿನಗಳು ಬಾಕಿ ಇರುವುದರಿಂದ ೬ ಸಾವಿರ ಗ್ರಾಮ ಪಂಚಾಯತ ಸದಸ್ಯರ ಮತಗಳನ್ನು ಕೇಂದ್ರೀಕರಿಸಿ, ಎಲ್ಲಾ ರೀತಿಯ ಪ್ರಚಾರ ಕಾರ್ಯಕ್ಕೆ ಕಾಂಗ್ರೆಸ್, ಬಿಜೆಪಿ ಮುಖಂಡರು ತೊಡಗಿದ್ದಾರೆ.
  ಈ ವಿಡಿಯೋ ವೈರಲ್‌ನಿಂದ ಬಿಜೆಪಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಯಾರಿಗೆ ಎಷ್ಟು ನಷ್ಟ, ಎಷ್ಟು ಲಾಭ ಎನ್ನುವುದು ಚುನಾವಣೆ ಫಲಿತಾಂಶದ ನಂತರವೇ ಸ್ಪಷ್ಟಗೊಳ್ಳಲಿದೆ.