ಕುಷ್ಟಗಿ ಪುರಸಭೆ ಬಲ ಹೆಚ್ಚಿಸಿಕೊಂಡ ಬಿಜೆಪಿ

ಸಂಜೆವಾಣಿ ವಾರ್ತೆ
ಕುಷ್ಟಗಿ:ಸೆ.8- ಪುರಸಭೆ 16ನೇ ವಾರ್ಡ್‌ಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಅಕ್ಕಮಹಾದೇವಿ ನಾಯಕವಾಡಿ ಗೆಲುವು ಸಾಧಿಸಿದರು. ಅಕ್ಕಮಹಾದೇವಿ ನಾಯಕವಾಡಿ ಅವರು 438 ಮತಗಳನ್ನು ಗಳಿಸಿ ವಿಜೇತರಾದರೆ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಪಾರ್ವತಿ ಬಂಡಿ ಅವರು 272 ಮತಗಳನ್ನು ಪಡೆದು ಪರಾಭವಗೊಂಡರು.ಒಟ್ಟು 948 ಪೈಕಿ 715 ಮಂದಿ ಮತ ಚಲಾಯಿಸಿದರು. 5 ಮತಗಳು ನೋಟಾ ಪಾಲಾದವು. ತಹಶೀಲ್ದಾರ್ ಕಚೇರಿಯಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಿತು. ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ ಚುನಾವಣಾಧಿಕಾರಿ ಅಮರೇಶ ಅವರು ಫಲಿತಾಂಶ ಘೋಷಿಸಿದರು.
ಈ ಹಿಂದೆ ಪಕ್ಷೇತರ ಸದಸ್ಯೆಯಾಗಿದ್ದ ರಾಜೇಶ್ವರಿ ಆಡೂರ ಅವರ ನಿಧನದ ನಂತರ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯು ಕಾಂಗ್ರೆಸ್‌ ಮತ್ತು ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಕಣವಾಗಿತ್ತು. ಈ ಮೊದಲು ಪುರಸಭೆಯ ಒಟ್ಟು 23 ಸದಸ್ಯರ ಪೈಕಿ ಕಾಂಗ್ರೆಸ್‌ 12, ಮೂವರು ಪಕ್ಷೇತರು ಮತ್ತು 8 ಬಿಜೆಪಿ ಸದಸ್ಯರಿದ್ದರು.
ಬಹುಮತ ಕೊರತೆಯಿದ್ದರೂ ಇಬ್ಬರು ಕಾಂಗ್ರೆಸ್‌ ಮತ್ತು ರಾಜೇಶ್ವರಿ ಆಡೂರು ಸೇರಿ ಮೂವರು ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈಗ ಈ ವಾರ್ಡ್‌ನ್ನು ತನ್ನ ವಶಕ್ಕೆ ಪಡೆಯುವ ಮೂಲಕ ಬಿಜೆಪಿ ಪುರಸಭೆಯಲ್ಲಿ ಮತ್ತೊಂದು ಸ್ಥಾನವನ್ನು ಹೆಚ್ಚಿಸಿಕೊಂಡಂತಾಗಿದೆ.
ಪಕ್ಷೇತರ ಸದಸ್ಯೆಯಾಗಿದ್ದರೂ ಬಿಜೆಪಿ ಬೆಂಬಲಿಸಿದ್ದರಿಂದ ರಾಜೇಶ್ವರಿ ಆಡೂರು ಅವರಿಗೆ ಉಪಾಧ್ಯಕ್ಷೆ ಸ್ಥಾನ ನೀಡಲಾಗಿತ್ತು. ಈಗ ಅದೇ ವಾರ್ಡ್‌ನಿಂದ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಅಕ್ಕಮಹಾದೇವಿ ನಾಯಕವಾಡಿ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡುವ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ.
ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ, ಪಕ್ಷದ ಅಭ್ಯರ್ಥಿ ಅಕ್ಕಮಹಾದೇವಿ ಅವರ ಗೆಲುವನ್ನು ಮೊದಲೇ ನಿರೀಕ್ಷಿಸಲಾಗಿತ್ತು, ಈ ಫಲಿತಾಂಶದಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ ಎಂದರು.
ಬಯ್ಯಾಪುರ ಪ್ರತಿಕ್ರಿಯೆ: ಕಾಂಗ್ರೆಸ್‌ ಸೋಲಿನ ಕುರಿತು ಪ್ರತಿಕ್ರಿಯಿಸಿದ ಶಾಸಕ ಅಮರೇಗೌಡ ಬಯ್ಯಾಪುರ, ‘ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂಬುದನ್ನು ಮೊದಲೇ ನಿರೀಕ್ಷಿಸಿದ್ದೆವು, ಆದರೆ ಮತಗಳ ಅಂತರ ಇಷ್ಟೊಂದು ಹೆಚ್ಚಾಗುತ್ತದೆ ಎಂಬ ಲೆಕ್ಕಾಚಾರ ಇರಲಿಲ್ಲ. ಮತದಾರರ ತೀರ್ಪನ್ನು ಗೌರವಿಸುತ್ತೇವೆ’ ಎಂದರು.