ಕುಶಾಲನಗರ ಸುತ್ತಮುತ್ತ ಪ್ರವಾಹದ ಪರಿಸ್ಥಿತಿ; ಮನೆ ಖಾಲಿಮಾಡಲು ಸೂಚನೆ

ಕೊಡಗು, ಜು ೧೨- ಧಾರಾಕಾರ ಮಳೆಯಿಂದ ಕಾವೇರಿ ನದಿ ಉಕ್ಕಿ ಹರಿದು ಪ್ರವಾಹ ಸ್ಥಿತಿ ಉಂಟಾಗಿರುವ ಪರಿಣಾಮ ಕುಶಾಲನಗರ ಪಟ್ಟಣ ಪಂಚಾಯಿತಿ ಸಾಯಿ ಬಡಾವಣೆ, ಕುವೆಂಪು, ಶೈಲಜಾ ಬಡಾವಣೆ ಸೇರಿದಂತೆ ಕಾವೇರಿ ಪ್ರವಾಹದಲ್ಲಿ ಮುಳುಗುವ ಬಡಾವಣೆಗಳ ಮನೆಗಳಿಗೆ ನೋಟಿಸ್ ನೀಡಿ ಮನೆ ಖಾಲಿ ಮಾಡುವಂತೆ ಸೂಚಿಸಿದೆ.
ಕೊಡಗು ಜಿಲ್ಲೆಯ ಭಾಗಮಂಡಲ ಸುತ್ತಮುತ್ತಲ ಭಾಗದಲ್ಲಿ ಮಳೆ ತೀವ್ರಗೊಂಡಂತೆಲ್ಲಾ ಕುಶಾಲನಗರದಲ್ಲಿ ಆತಂಕ ಹೆಚ್ಚುತ್ತಿದೆ. ಪಟ್ಟಣದ ಸಾಯಿ, ಕುವೆಂಪು ಮತ್ತು ಶೈಲಜಾ ಬಡಾವಣೆಗಳಲ್ಲಿ ಕಾವೇರಿ ನದಿ ಪ್ರವಾಹ ಎದುರಾಗುವ ಸಾಧ್ಯತೆ ಇದೆ.
೨೦೧೮ ರಲ್ಲಿ ಮೊದಲ ಭಾರಿಗೆ ಇದೇ ರೀತಿ ನುಗ್ಗಿದ್ದ ನೀರು ಇಡಿ ಬಡಾವಣೆಯನ್ನು ಸಂಪೂರ್ಣ ಮುಳುಗಡೆಗೊಳಿಸಿತ್ತು. ಹಾಗಾಗಿ ಈ ಕುಶಾಲನಗರ ಪಟ್ಟಣ ಪಂಚಾಯಿತಿ ಎಚ್ಚೆತ್ತುಕೊಂಡು ಮನೆಗಳಿಗೆ ನೋಟಿಸ್ ನೀಡಿ ಮನೆ ಖಾಲಿ ಮಾಡುವಂತೆ ಸೂಚನೆ ನೀಡಿದೆ. ಮಳೆ ತೀವ್ರವಾಗಿ ಸುರಿಯುತ್ತಿರುವುದರಿಂದ ಕೆಲವು ಕುಟುಂಬಗಳು ಈಗಾಗಲೇ ತಮ್ಮ ಮನೆಗಳ ಎಲ್ಲಾ ವಸ್ತುಗಳನ್ನು ತುಂಬಿಕೊಂಡು ಮನೆ ಖಾಲಿ ಮಾಡಿವೆ.
ಕಾವೇರಿ ಮತ್ತು ಹಾರಂಗಿ ಪ್ರವಾಹದ ನೀರು ಕುಶಾಲನಗರ ತಾಲ್ಲೂಕಿನ ಕಣಿವೆ ಮತ್ತು ಹೆಬ್ಬಾಲೆ ಗ್ರಾಮಗಳ ರೈತರ ಹೊಲ ಗದ್ದೆಗಳಿಗೆ ನುಗ್ಗಿದೆ. ಇದರಿಂದಾಗಿ ಹತ್ತಾರು ಎಕರೆಯಲ್ಲಿ ಬೆಳೆದಿದ್ದ ಭತ್ತ, ಅಡಿಕೆ, ಸಿಹಿಗೆಣಸು ಮತ್ತು ಮೆಕ್ಕೆಜೋಳದ ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ.ಸ್ಥಳಕ್ಕೆ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.