ಕುವೆಂಪು ಹೇಳಿದ ಮನುಕುಲದ ಸಂದೇಶ ಎಲ್ಲರೂ ಮರೆತಿದ್ದಾರೆ 

ದಾವಣಗೆರೆ.ಏ.೧೮: ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವ ಬದಲು ಅವನನ್ನು ಜಾತಿಯ ಮುಖೇನ ನೋಡುವಂತಹ ಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ ಎಂದು ಹಿರಿಯ ಸಾಹಿತಿ, ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ ಅಭಿಪ್ರಾಯ ಪಟ್ಟರು.

ನಗರದ ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ  ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪಿ.ಆರ್. ತಿಪ್ಪೇಸ್ವಾಮಿ ಕಲಾ ಸಂಭ್ರಮ 2023 ಹಾಗೂ ಪಿಆರ್ ಟಿ ಕಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲಾಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಎಡ ಮತ್ತು ಬಲ ಪಂಥದ ನಡುವೆ ಮನುಜ ಪಂಥ ಮರೆತು ಹೋಗುತ್ತಿದೆ. ಯಾವುದೇ ದ್ವನಿ ಕೇಳಿಬಂದರೂ ಅದು ಎಡವೋ, ಬಲವೋ ಎಂದು ನೋಡುವ ಪರಿಸ್ಥಿತಿ ಇದೆ. ಕುವೆಂಪು ಅವರು ಹೇಳಿದ ಮನುಕುಲದ ಸಂದೇಶವನ್ನು ಎಲ್ಲರೂ ಮರೆತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಪಿ.ಆರ್. ತಿಪ್ಪೇಸ್ವಾಮಿ ಅವರಿಗೆ  ಬಾಲ್ಯದಿಂದಲೇ ಕಲೆ ಮೈಗುದಿತ್ತು. ಬಾಲ್ಯದಲ್ಲಿ ಅವರು ಬರೆದಿದ್ದ ಗಾಂಧೀಜಿ ಚಿತ್ರ ಅವರಲ್ಲಿನ ಚಿತ್ರಕಲಾ ಪ್ರತಿಭೆಗೆ ಸಾಕ್ಷಿಯಾಗಿತ್ತು. ಕಲೆಯೊಂದಿಗೆ ಸಮಾಜದಲ್ಲಿ ಅವರ ಒಡನಾಟ ಸಭ್ಯ, ಚಿಂತಕ ಶ್ರೇಷ್ಠ ವ್ಯಕ್ತಿಗಳ ಜೊತೆ ಇತ್ತು ಎಂದರಲ್ಲದೆ, ಪಿ.ಆರ್. ತಿಪ್ಪೇಸ್ವಾಮಿ ಅವರೊಂದಿಗಿನ ಒಡನಾಟ ನೆನಪಿಸಿಕೊಂಡರು.

ಸಮಾರಂಭದಲ್ಲಿ ಚಿಂದೋಡಿ ಚಂದ್ರಧರ, ನಾ. ರೇವಣಸಿದ್ದಪ್ಪ, ಎ. ಮಹಾಲಿಂಗಪ್ಪ, ಸದಾನಂದ ಹೆಗಡೆ, ಸತೀಶ್ ಕುಮಾರ್ ಪಿ. ವಲ್ಲೇಪುರೆ, ಪಿ. ಚಿಕ್ಕಣ್ಣ, ಸಾಲಿಗ್ರಾಮ ಗಣೇಶ್ ಶೆಣೈ, ಕೆ. ಸಿ. ಮಹಾದೇವ ಶೆಟ್ಟಿ, ಸಂತೋಷ್ ಕುಮಾರ್ ಕುಲಕರ್ಣಿ ಇತರರಿದ್ದರು.