ಕುವೆಂಪು-ಸಿ.ಅಶ್ವತ್ಥ್ ಗಾನ-ನಮನ ಕಾರ್ಯಕ್ರಮ


ಬಳ್ಳಾರಿ, ಜ.11: ಶ್ರೀವಾಮದೇವ ಶಿವಾಚಾರ್ಯ ಕಲಾ ಟ್ರಸ್ಟ್, ಶ್ರೀಮಂಜುನಾಥ ಕಲಾ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕೊಟ್ಟೂರುಸ್ವಾಮಿ
ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರಕವಿ ಕುವೆಂಪು ಹಾಗೂ ಗಾನಗಾರುಡಿಗ ಸಿ.ಅಶ್ವತ್ಥ್ ಗಾನ-ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉದ್ಘಾಟಿಸಿ ಮಾತನಾಡಿದ ರಂಗತೋರಣ ಕಾರ್ಯದರ್ಶಿ ಹಾಗೂ ರಂಗಚಿಂತಕ ಪ್ರಭುದೇವ ಕಪ್ಪಗಲ್ ಅವರು, ಕುವೆಂಪು ಅವರು ವೈಚಾರಿಕ ಮತ್ತು ಆಧ್ಯಾತ್ಮಿಕವಾಗಿ ಚಿಂತನೆಗಳನ್ನು ಮಾಡುತ್ತಿದ್ದರು. ಅರವಿಂದರು, ಶಾರದಾದೇವಿ,
ಸ್ವಾಮಿ ವಿವೇಕಾನಂದರು ಅವರ ಮೇಲೆ ಹೆಚ್ಚು ಪ್ರಭಾವಿಸಿದ್ದರು. ಕುವೆಂಪು ಅವರ ಚಿಂತನೆಗಳು ಹಾಗೂ ಅವರ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿವೆ. ಕುವೆಂಪು ಅವರ ಅನೇಕ ಗೀತೆಗಳಿಗೆ ರಾಗ ಸಂಯೋಜನೆ ಮಾಡಿ ತಮ್ಮದೇ ಕಂಚಿನ ಕಂಠದಲ್ಲಿ ಹಾಡಿರುವ ಸಿ.ಅಶ್ವತ್ಥ್ ಅವರು ಕುವೆಂಪು ಸೇರಿದಂತೆ ಅನೇಕ ಕವಿಗಳ
ಹಾಡುಗಳಿಗೆ ಜೀವ ತುಂಬಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ನಿವೃತ್ತ ಅಧಿಕಾರಿ ಚೋರನೂರು ಕೊಟ್ರಪ್ಪ ಅವರು ವಿದ್ಯಾರ್ಥಿಗಳು ಸದಾ ಓದಿನ ಹೆಚ್ಚು ಗಮನ ನೀಡಬೇಕು. ಹೆಚ್ಚು ಕುತೂಹಗಳು ಹಾಗೂ ಚಿಕಿತ್ಸಕ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ದಸ್ತಗಿರಿಸಾಬ್ ದಿನ್ನಿ ಅವರು ಕುವೆಂಪು ಅವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಕೊಡುಗೆ ಹಾಗೂ ಸಿ.ಅಶ್ವತ್ಥ್ ಅವರ ಸಂಗೀತ ಸೇವೆಯ ಕುರಿತು ಉಪನ್ಯಾಸ ನೀಡಿದರು. ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷೆ ಕ್ಯಾತ್ಯಾಯಿನಿ ಮರಿದೇವಯ್ಯ ಅವರು ಬಳ್ಳಾರಿ ಜಿಲ್ಲೆಯ ಪ್ರತಿಭಾನ್ವಿತ ಚಿತ್ರಕಲಾ ಕಲಾವಿದರ ಕುರಿತು
ಪ್ರಸ್ತಾಪಿಸಿದರಲ್ಲದೆ, ವೀರಶೈವ ವಿದ್ಯಾವರ್ಧಕ ಸಂಘದಿಂದ ಚಿತ್ರಕಲಾ ಕಾಲೇಜು ಆರಂಭಿಸುವಂತಾಗಲಿ ಎಂದು ಆಶಿಸಿದರು. ಶ್ರೀಮಂಜುನಾಥ ಕಲಾ ಬಳಗದ ಅಧ್ಯಕ್ಷ ಮಂಜುನಾಥ ಗೋವಿಂದ ಅವರು
ಪ್ರಾಸ್ತಾವಿಕ ಮಾತನಾಡಿದರು. ಲೆಕ್ಕ ಪರಿಶೋಧಕ ಸಿದ್ಧರಾಮೇಶ್ವರಗೌಡ ಕರೂರು, ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಸತೀಶ್ ಎ.ಹಿರೇಮಠ ಹಾಗೂ
ಎಸ್.ಜಿ.ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶರಣಬಸವರಾಜ ಅವರು ಸಮಾರಂಭದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಬಳಿಕ ಜರುಗಿದ ಸಂಗೀತ ಕಾರ್ಯಕ್ರಮದಲ್ಲಿ ಯಲ್ಲನಗೌಡ ಶಂಕರಬಂಡೆ, ಜಡೇಶ್ ಎಮ್ಮಿಗನೂರು, ಹನುಮಯ್ಯ ತಿಮ್ಮಲಾಪುರ ತಂಡದಿಂದ ಕುವೆಂಪು ಸೇರಿದಂತೆ ಕನ್ನಡ ಹಿರಿಯ ಕವಿಗಳ ಗೀತೆಗಳಿಗೆ ಗಾಯನ ಸುಧೆ ಹರಿಸಿದರು.