ಕುವೆಂಪು ವಾಕ್ಯ ಬದಲಾವಣೆ ಎಬಿವಿಪಿಯಿಂದ ಖಂಡನೆ

ಔರಾದ :ಫೆ.21: “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ” “ಎನ್ನುವ ಕುವೆಂಪು ಅವರ ಅರ್ಥಪೂರ್ಣ ವಾಕ್ಯವನ್ನು ಬದಲಾಯಿಸಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಎಬಿವಿಪಿ ವತಿಯಿಂದ ಔರಾದ ತಹಶಿಲ್ದಾರ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕರ್ನಾಟಕ ಸರ್ಕಾರವು ರಾಜ್ಯದ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕೆಲವೊಂದು ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಗೊಂದಲವನ್ನು ಸೃಷ್ಟಿ ಮಾಡುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಶಾಲೆಗಳಲ್ಲಿ ಪರಂಪರೆಯಿಂದ ನಡೆದುಕೊಂಡು ಬಂದಿದ್ದ ಸರಸ್ವತಿ, ಗಣಪತಿ ಮೊದಲಾದ ರೀತಿಯ ಧಾರ್ಮಿಕ ಪೂಜೆಗಳನ್ನ ಮಾಡುವುದನ್ನು ನಿಷೇಧ ಮಾಡಿ ಗೊಂದಲವನ್ನ ಸೃಷ್ಟಿ ಮಾಡಿತ್ತು. ಸಾರ್ವಜನಿಕರ ಪ್ರತಿಭಟನೆಗೆ ಮಣಿದು ಆ ಆದೇಶವನ್ನು ಹಿಂತೆಗೆದುಕೊಂಡಿದ್ದ ಸರ್ಕಾರ ಈಗ ಮತ್ತೆ ವಸತಿ ಶಾಲೆಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಕುವೆಂಪು ಅವರ ವಾಕ್ಯ “ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ” , ಎನ್ನುವ ಘೋಷಣೆಯನ್ನ ಬದಲಾವಣೆ ಮಾಡಿ “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ”, ಎನ್ನುವ ವಾಕ್ಯವನ್ನು ಹಾಕಿರುವ ಸರ್ಕಾರದ ನಡೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ.

         ಈ ರೀತಿಯ ಘಟನೆಗಳಿಂದ ಎಲ್ಲಾ ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣಾದಾಯಕವಾಗಿರುವ ಕರ್ನಾಟಕ ರಾಜ್ಯದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪುರವರ ವಾಕ್ಯಗಳನ್ನ ತಿರುಚಿ ಸರ್ಕಾರ ವಿದ್ಯಾರ್ಥಿ ಸಮುದಾಯಕ್ಕೆ ಯಾವ ಸಂದೇಶವನ್ನ ಕೊಡಲು ಹೊರಟಿದೆ ಎಂಬುದು ರಾಜ್ಯದ ವಿದ್ಯಾರ್ಥಿ ಸಮುದಾಯದ ಪ್ರಶ್ನೆಯಾಗಿದೆ. ವಿದ್ಯೆಯನ್ನು ಕಲಿಯಲು ಬರುವ ವಿದ್ಯಾರ್ಥಿಗಳಲ್ಲಿ ಇರಬೇಕಾದುದು ಶ್ರದ್ದೆ. ಜ್ಞಾನಕ್ಕೆ ಶರಣಾಗುವ ಗುಣ. ಇದು ಗುಲಾಮಿತನವಲ್ಲ, ವಿನಯ. ಪ್ರಶ್ನಿಸುವ ಮನೋಭಾವನೆ ಹುಟ್ಟಬೇಕಾದುದು ಕಲಿಕೆ ಪೂರ್ಣಗೊಳ್ಳುವಾಗ. ಶಾಲೆಗೆ ಪ್ರವೇಶ ಪಡೆದಾಗಲೇ ಪ್ರಶ್ನಿಸುವುದು ಎಂದರೆ ಅಸಂಬದ್ಧ, ಗೊಂದಲಗಳನ್ನು ಹುಟ್ಟುಹಾಕುವುದೇ ಆಗಿದೆ. ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸಿದ್ದಾಂತದ ರಾಜಕಾರಣವನ್ನು ಸೇರ್ಪಡೆ ಮಾಡಲು ಹೊರಟಿರುವ ಸರ್ಕಾರದ ನಡೆ ಖಂಡನೀಯ. ವಿದ್ಯಾರ್ಥಿ ಸಮುದಾಯ ಶಿಕ್ಷಣ,ದೇಶ, ರಾಷ್ಟ್ರೀಯತೆ, ಭಾರತೀಯ ಸಂಸ್ಕಾರ, ಭಾರತೀಯ ರಾಷ್ಟ್ರ ಪುರುಷರ, ಈ ವಿಚಾರದಡಿಯಲ್ಲಿ ಮುಂದುವರೆಯಬೇಕೆ ಹೊರತು ಪಕ್ಷದ ಸಿದ್ಧಾಂತವನ್ನು ವಿದ್ಯಾರ್ಥಿಗಳ ಮೇಲೆ ಹೇರಲು ಹೊರಟಿರುವುದು ಶೋಚನೀಯ ಸಂಗತಿ. 

ಶಿಕ್ಷಣ ಸಂಸ್ಥೆಗಳನ್ನು ರಾಜಕೀಯ ವಿಚಾರದ, ಓಲೈಕೆಯ ಕೇಂದ್ರವಾಗಿಸಲು ಪ್ರಯತ್ನಿಸಿದರೆ ವಿದ್ಯಾರ್ಥಿ ವೃಂದ ತೀವ್ರವಾಗಿ ಪ್ರತಿಭಟಿಸಲಿದೆ. ಕೂಡಲೇ ಸರ್ಕಾರ ಆದೇಶವನ್ನು ಹಿಂಪಡೆದು ಈ ಮೊದಲಿನ ವಾಕ್ಯವನ್ನೇ ಉಳಿಸಿಕೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಕಾರ್ಯಕಾರಣಿ ಸದಸ್ಯೆ ಇಂದ್ರಾಣಿ ಸಗರ, ಜಿಲ್ಲಾ ಸಂಚಾಲಕ ಶಶಿಕಾಂತ ರ್ಯಾಕಲೆ, ಗಜಾನಂದ, ಅರುಣ,ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಪ್ರಮುಖ ಅಶೋಕ ಶೆಂಬೆಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.