ಕುವೆಂಪು ಅವರ ವಿಶ್ವಮಾನವ ಸಂದೇಶಗಳು ಎಲ್ಲಾ ಕಾಲಕ್ಕೂ ಪ್ರಸ್ತುತ

ಕಲಬುರಗಿ:ಆ.12: ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದ್ದು, ಅವು ನಿತ್ಯಸತ್ಯವಾಗಿವೆ. ಪ್ರತಿಯೊಂದು ಮಗುವು ಹುಟ್ಟುತ್ತಲೇ ವಿಶ್ವಮಾನವನಾಗಿರುತ್ತಾನೆ. ಮುಂದೆ ಬೆಳೆಯುತ್ತಾ ಹೋದಂತೆ ಜಾತಿ, ಅಂತಸ್ತು ಮುಂತಾದ ಬೇಧ-ಭಾವಗಳ ಮೂಲಕ ಅವನನ್ನು ನಾವು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಆದರೆ ಅವನನ್ನು ವಿಶ್ವ ಮಾನವನನ್ನಾಗಿಯೇ ಇರಲು ಬಿಡಬೇಕು ಎಂಬುದು ಕುವೆಂಪು ಅವರ ವಿಶ್ವ ಮಾನವ ಸಂದೇಶವಾಗಿವೆ ಎಂದು ಹಿರಿಯ ಸಾಹಿತಿ ಡಾ.ರಾಜೇಂದ್ರ ಯರನಾಳೆ ಹೇಳಿದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಜಿಲ್ಲಾ ವೀರಶೈವ ಸಮಾಜ ಟ್ರಸ್ಟ್ ಅಡಿಯಲ್ಲಿನ ಶ್ರೀ ಚನ್ನಬಸವೇಶ್ವರ ಪ್ರೌಢ ಶಾಲೆಯಲ್ಲಿ ಶನಿವಾರ ಆಯೋಜಿಸಿದ `ಬೆಳಕು’ ಎಂಬ ವಾರಕ್ಕೊಂದು ಹೊಸ ಚಿಂತನೆ ಕಾರ್ಯಕ್ರಮದಡಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಕುರಿತು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗಾಣಿಗ ಸಮಾಜದ ನೌಕರರ ಸಂಘದ ಅಧ್ಯಕ್ಷ ಸಂಗಣ್ಣಗೌಡ ಪಾಟೀಲ ಕಲ್ಲೂರ, ವಿದ್ಯಾರ್ಥಿಗಳಾದವರು ಓದುವುದಕ್ಕಷ್ಟೇ ಸೀಮಿತವಾಗಿರದೇ ಸಾಹಿತ್ಯಾಸಕ್ತಿ ಸೇರಿದಂತೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕಸಾಪ ತಾಲೂಕಾಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ, ಸಾಹಿತ್ಯ ಕ್ಷೇತ್ರದಲ್ಲಿ ಇಂದಿನ ವಿದ್ಯಾರ್ಥಿಗಳ ಆಸಕ್ತಿ ಕಡಿಮೆಯಾಗುತ್ತಿದ್ದುದ್ದನ್ನು ಕಂಡು ಪರಿಷತ್ತಿನ ವತಿಯಿಂದ ವಾರಕ್ಕೊಂದು ಇಂಥ ಕಾರ್ಯಕ್ರಮ ಪ್ರತಿಶಾಲೆಗಳಲ್ಲಿ ಆಯೋಜಿಸುವ ಮೂಲಕ ಮಹಾತ್ಮರ ಸಂದೇಶಗಳನ್ನು ಮುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಶಾಲೆಯ ಮುಖ್ಯಸ್ಥ ಚನ್ನವೀರಪ್ಪ ಗುಡ್ಡಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಎಸ್ ಅಂಡಗಿ, ಮಾತಾಜೀ ನಾಗೂರ, ವಿಶ್ವನಾಥ ಯನಗುಂಟಿ, ಬಸ್ವಂತರಾಯ ಕೋಳಕೂರ, ವಿಶಾಲಾಕ್ಷಿ ಮಾಯಣ್ಣವರ್, ರೇವಣಸಿದ್ದಪ್ಪ ಜೀವಣಗಿ, ಸೋಮಶೇಖರ ನಂದಿಧ್ವಜ, ಕೆ.ವಿಶ್ವನಾಥ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.