
ಕೋಲಾರ, ಮೇ ೨೩- ಸಮಾಜದಲ್ಲಿ ಪ್ರಭುತ್ವ ಮಾಡುವ ಅಮಾನವೀಯ ಚಟುವಟಿಕೆಗಳಿಗೆ ಹಾಗೂ ತಪ್ಪು ಹೆಜ್ಜೆಗಳನ್ನು ಪ್ರಶ್ನೆ ಮಾಡುವ ಮನಸ್ಥಿತಿ ಇವತ್ತಿನ ಯುವ ಜನತೆಯಲ್ಲಿ ಬರಲು ಕುವೆಂಪು ಅವರ ಸಾಹಿತ್ಯ ಅತ್ಯವಶ್ಯಕವಾಗಿದೆ ಎಂದು ಬೆಂಗಳೂರು ನಾಡೋಜ ಡಾ.ರಾಜಕುಮಾರ್ ಅಧ್ಯಯನ ಪೀಠ ಸಂಚಾಲಕ ಹಾಗೂ ಹಿರಿಯ ಪ್ರಾಧ್ಯಾಪಕ ಡಾ.ಕೆ.ಸಿ.ಶಿವಾರೆಡ್ಡಿ ತಿಳಿಸಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಕನ್ನಡ ಸ್ನಾತಕೋತ್ತರ ವಿಭಾಗದಿಂದ ಕುವೆಂಪು ಸಾಹಿತ್ಯ ಮರು ಓದು ಕುರಿತಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರದಲ್ಲಿ ಇದ್ದರೂ ಕೂಡ ಚುನಾವಣೆಯ ಸಂದರ್ಭದಲ್ಲಿ ಜನರನ್ನು ಭಿಕ್ಷಕರಾಗಿ ಮಾಡಲು ಹೊರಟಿದ್ದಾರೆ ಸರಕಾರಗಳು ಅಭಿವೃದ್ಧಿ ಮಾಡಿದ್ದೇ ಆದರೆ ಆಶ್ವಾಸನೆ ಕೊಡುವ ಅವಶ್ಯಕತೆ ಇರುವುದಿಲ್ಲ ಇವತ್ತು ರೈತರು ಸೇರಿದಂತೆ ಪ್ರತಿಯೊಂದು ವರ್ಗವನ್ನು ಶೋಷಣೆ ಮಾಡಲು ಹೊರಟಿದ್ದಾರೆ ಜೊತೆಗೆ ಕರುಣೆಯ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ ಇವುಗಳ ಬಗ್ಗೆ ಅವತ್ತೇ ಕುವೆಂಪು ಅವರ ಸಾಹಿತ್ಯದ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಸ್.ತ್ಯಾಗರಾಜ್ ಮಾತನಾಡಿ, ಮಹಾನ್ ಚೇತನದ ಆದರ್ಶಗಳು ನಮಗೆಲ್ಲ ಮಾದರಿಯಾಗಬೇಕಾಗಿದೆ ಎಂದರು.
ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ.ಅರಿವು ಶಿವಪ್ಪ ಮಾತನಾಡಿ, ಅವರ ಆದರ್ಶಗಳನ್ನು ಅನುಸರಣೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರವೇ ಕುವೆಂಪು ಅವರಿಗೆ ಗೌರವ ಕೊಟ್ಟಂತೆ ಆಗುತ್ತದೆ ಎಂದರು.
ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಪಿ ಸಂಗೀತ, ಸಹಾಯಕ ಪ್ರಾಧ್ಯಾಪಕ ಎಂ.ಶ್ರೀನಿವಾಸಮೂರ್ತಿ, ವಿದ್ಯಾರ್ಥಿ ವಿಜಯಕುಮಾರ್, ಪ್ರಾಧ್ಯಾಪಕ ನಾಗನಾಳ ಮುನಿಯಪ್ಪ, ಸಹಾಯಕ ಪ್ರಾಧ್ಯಾಪಕರಾದ ರವಿಕುಮಾರ್, ಡಾ ಪುಷ್ಪಲತಾ, ಲಕ್ಷ್ಮೀನಾರಾಯಣ ಇದ್ದರು.