ಕುಳಿತವರು ಎಡವುದಿಲ್ಲ ನಡೆಯುವವರು ಎಡವುವರು ದಾರಿ ತಪ್ಪುವರು

ಭಾಲ್ಕಿ:ನ.18:
ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ
ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ
ವಿಷಯದಲ್ಲಿ ಉದಾಸೀನ, ಭಾವದಲ್ಲಿ ದಿಗಂಬರ
ಜ್ಞಾನದಲ್ಲಿ ಪರಮಾನಂದ ನೆಲೆಗೊಂಡ ಬಳಿಕ
ಸೌರಾಷ್ಟ್ರ ಸೋಮೇಶ್ವರ ಲಿಂಗವು ಬೇರಿಲ್ಲ ಕಾಣಿರೋ.
ಬಹಳಷ್ಟು ಸಾರಿ ನಮ್ಮ ಆಚಾರ ವಿಚಾರ ವ್ಯವಹಾರಗಳು ನಮ್ಮನ್ನು ಧರ್ಮದ ಮಾರ್ಗದಿಂದ ಸತ್ಯದ ಮಾರ್ಗದಿಂದ ಸತ್ಸಂಗದ ದಾರಿಯಿಂದ ವಿಚಲಿತಗೊಳಿಸಿ ಬೇರೆ ಗೊಳಿಸುತ್ತವೆ. ದಾರಿ ತಪ್ಪಿಸುತ್ತವೆ ಅದು ಸಹಜ. ಕುಳಿತವರು ಎಡವುದಿಲ್ಲ ನಡೆವವರು ಎಡವವರು ದಾರಿ ತಪ್ಪುವುದು. ಎಷ್ಟೋ ಸಾರಿ ಒಳ್ಳೆಯ ಮಾರ್ಗದಲ್ಲಿ ಸಾಗಲು ಬೋರ್ಡ್ ಹಾಕಿದ್ದರು ಸಹ ಅದನ್ನು ಗಮನಿಸದೆ ನಾವು ದಾರಿ ತಪ್ಪಿದ ಅನೇಕ ಉದಾಹರಣೆ ಇಲ್ಲಿದೆ. ಆವಾಗ “ಕರುಣಾಳು ಬಾ ಬೆಳಕೇ ಮುಸುಕಿದೆ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು” ಎಂಬಂತೆ ಒಂದು ಹೆಜ್ಜೆ ಸಾಕು ದೇವನೆಡೆಗೆ.
ಶಿವಶರಣರು ಮನುಕುಲದ ಉದ್ಧಾರಕ್ಕಾಗಿ ಒಂದು ಮಹಾಮಾರ್ಗವನ್ನು ನಿರ್ಮಿಸಿದ್ದಾರೆ. ನಾವೆಲ್ಲ ಆ ಮಾರ್ಗದ ಪ್ರತಿಕರು. ಜಗತ್ತಿನಲ್ಲಿ ಅತ್ಯಂತ ವಿಶೇಷ ಸಾಧಕರು ಎಲ್ಲೆಲ್ಲಿ ಎಡವಬಹುದು ಎಂಬ ಕಲ್ಪನೆಯನ್ನು ಇಟ್ಟುಕೊಂಡು ಶಿವಶರಣರು ಅಂತಹ ಎಲ್ಲಾ ಸಂದರ್ಭಗಳಿಗೆ ಉತ್ತರವನ್ನು ಸುಂದರವಾಗಿ ಸುಲಭವಾಗಿ ಸರಳವಾಗಿ ರಚಿಸಿ ವಚನಗಳ ಮೂಲಕ ನಮಗಾಗಿ ಇಟ್ಟಿದ್ದಾರೆ.
ಎರೆದರೆ ನೆನೆಯದು, ಮರೆದರೆ ಬಾಡದು
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ!
ನೋಡಯ್ಯ, ಕೂಡಲಸಂಗಮದೇವಯ್ಯ,
“ಜಂಗಮ”ಕ್ಕೆರೆದರೆ, “ಸ್ಥಾವರ” ನೆನೆಯಿತ್ತು.
ಮರಕ್ಕೆ ಬಾಯಿ ಬೇರೆಂದು
ತಳಕ್ಕೆ ನೀರನೆರೆದರೆ ಮೇಲೆ ಪಲ್ಲವಿಸಿತ್ತು ನೋಡಾ!
ಲಿಂಗದ ಬಾಯಿ ಜಂಗಮವೆಂದು
ಪಡಿಪದಾರ್ಥವ ನೀಡಿದರೆ, ಮುಂದೆ ಸಕಲಾರ್ಥವನೀವನು!
ಆ ಜಂಗಮವ ಹರನೆಂದು ಕಂಡು
ನರನೆಂದು ಭಾವಿಸಿದರೆ, ನರಕ ತಪ್ಪದು ಕಾಣಾ!
ಕೂಡಲಸಂಗಮದೇವ.

ಹಾಗೆಯೇ ಒಬ್ಬ ಮನುಷ್ಯನಿಗೆ ಏನೇನು ಸಮಸ್ಯೆಗಳು ಬರುತ್ತವೆ . ಅವುಗಳಿಗೆ ಒಂದು ಉತ್ತರವನ್ನು ಕೊಡುವ ವೈಶಿಷ್ಟ್ಯ. ಆ ಉತ್ತರಗಳೇನು ದೊಡ್ಡ ದೊಡ್ಡ ಕತೆಗಳಲ್ಲ, ದೂರದ ಉದಾಹರಣೆಗಳಿಲ್ಲ, ಅದು ನಮ್ಮ ಸಮೀಪದ ಸರಳ ಉತ್ತರವನ್ನು ಕೊಟ್ಟು ಶರಣರು ನಮ್ಮನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅವರ ಒಂದೇ ಒಂದು ಗುರಿ. ಎಲ್ಲರೂ ಸಹ ಲಿಂಗಾಂಗ ಸಾಮರಸ್ಯ ವನ್ನು ಹೊಂದಬೇಕು. ಆ ಗುರಿಯ ಮಧ್ಯದಲ್ಲಿ ಯಾರು ನಿಲ್ಲದಂತೆ ಅವರನ್ನು ಕೈಹಿಡಿದು ಕರೆದುಕೊಂಡು ಹೋಗುವ ಮಾರ್ಗವನ್ನು ನಿರ್ಮಿಸಿ ಕೊಟ್ಟಿದ್ದಾರೆ. 900 ವರ್ಷಗಳ ವರೆಗೂ ಸಹ ಆ ಮಾರ್ಗದಲ್ಲಿ ಸ್ವಚ್ಛ ಮತ್ತು ಶಿಸ್ತಿನಿಂದ ಹಾಗೆಯೇ ಇದೆ. ಅವರಲ್ಲಿ ಅಕ್ಕಮಹಾದೇವಿ ತಾಯಿ ಒಬ್ಬರು. ಅವರು ತಮ್ಮ ವಚನದಲ್ಲಿ ಹೇಳುತ್ತಾರೆ. ಮಹಾಮಾರ್ಗವನ್ನು ಎರಡು ರೀತಿಯಲ್ಲಿ ವರ್ಣಿಸುವ ಪದ್ಧತಿ ನಮ್ಮ ದೇಶದಲ್ಲಿ ಇದೆ.

 1. ಸಕಾರಾತ್ಮಕ ಮಾರ್ಗ
 2. ನಿತ್ಯಾತ್ಮಕ ಮಾರ್ಗ.
  ನಿರಾಕರಣೆ ಮಾಡಿ ಒಂದು ಸರಿದಾರಿಗೆ ತರುವ ಪದ್ಧತಿ. ಆ ಪದ್ಧತಿಯನ್ನು ಬಳಸಿ ತಾಯಿ ಅಕ್ಕ ಮಹಾದೇವಿ ಈ ವಚನದಲ್ಲಿ ಹೇಳುತ್ತಾರೆ.
  ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ ಅಯ್ಯಾ? ನೀನು ಬಹಿರಂಗವ್ಯವಹಾರದೂರಸ್ಥನು ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೆ ಅಯ್ಯಾ? ನೀನು ವಾಙ್ಮನಕ್ಕತೀತನು. ಜಪಸ್ತೋತ್ರದಿಂದ ಒಲಿಸುವೆನೆ ಅಯ್ಯಾ? ನೀನು ನಾದಾತೀತನು. ಭಾವಜ್ಞಾನದಿಂದ ಒಲಿಸುವೆನೆ ಅಯ್ಯಾ? ನೀನು ಮತಿಗತೀತನು. ಹೃದಯ ಕಮಲಮಧ್ಯದಲ್ಲಿ ಇಂಬಿಟ್ಟುಕೊಂಬೆನೆ ಅಯ್ಯಾ? ನೀನು ಸವಾರ್ಂಗ ಪರಿಪೂರ್ಣನು. ಒಲಿಸಲೆನ್ನಳವಲ್ಲ ನೀನೊಲಿವುದೆ ಸುಖವಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ.
  ನೂರಾರು ವರ್ಷಗಳಿಂದ ನಮ್ಮ ಮತ್ತು ದೇವರ ನಡುವೆ ಕೊಡುವ ತೆಗೆದುಕೊಳ್ಳುವ ವ್ಯವಹಾರ ನಡೆದಿದೆ. ಎಲ್ಲಾ ದೇವಸ್ಥಾನದಲ್ಲಿಯೂ ನಡೆಯುತ್ತಿದೆ. ಯಾರು ದೊಡ್ಡವರೋ ಅವರು ಹೆಚ್ಚು ನೀಡಿ ಅರ್ಪಿಸಿ ದೊಡ್ಡದನ್ನು ಕೇಳಿ ಕೊಂಡು ಬರುತ್ತಾರೆ. ಸಣ್ಣವರು ಸಣ್ಣದನ್ನು ನೀಡಿ ಸಣ್ಣದನ್ನೂ ಪಡೆಯುತ್ತಾರೆ. ಇದು ಸಹಜ ಆದರೆ ಅಕ್ಕ ಮಹಾದೇವಿ ತಾಯಿ ಹೇಳುತ್ತಾರೆ, ಭಗವಂತನಿಗೆ ನಾವು ಏನನ್ನಾದರು ಕೊಟ್ಟು ಒಲಿಸಿ ಕೊಳ್ಳಬೇಕಾದರೇ ಭಹಿರಂಗ ವ್ಯವಹಾರಕ್ಕೆ ಅವನು ದೂರ ಇರುವನು ಎನ್ನುವುದು ಈ ಸಾಲಿನ ಸಾಮಾನ್ಯ ಭಾವ.
  ಅಷ್ಟವಿಧ ಅರ್ಚನೆ
  ಪೂಜೆ ಮಾಡುವಾಗ ನೀರೆರೆಯುವುದು, ವಸ್ತದಿಂದ ಶುಚಿಗೊಳಿಸುವುದು, ವಿಭೂತಿ ಧಾರಣೆ, ಗಂಧಧಾರಣೆ, ಅಕ್ಷತೆ, ಹೂವು ಅರ್ಪಿಸುವುದು, ಧೂಪ ದೀಪಗಳನ್ನು ಬೆಳಗುವುದು.
  ಈ ಎಂಟು ವಿಧದ ಅರ್ಚನೆಗಳನ್ನು ನಿನಗೆ ಇತ್ತು ನಾನು ಓಲಿಸಿಕೊಳ್ಳಬಯಸುವೆ ಆದರೆ ನೀನು ಬಹಿರಂಗ ದೂರಸ್ಥನು. ಆದ್ದರಿಂದ ಈ ಪೂಜೆಗೆ ಫಲವಿಲ್ಲ. ಹಾಗಾದರೆ ಒಲಿಸಿಕೊಳ್ಳಲು ಏನು ಮಾಡಬೇಕು. ಇದರ ಅರ್ಥ ಪೂಜೆ ಬಿಡಬೇಕು ಎನ್ನುವುದಲ್ಲ ಪೂಜೆಯನ್ನು ಮಾಡಿ ಮಾಡಿ ಸೋತು ಅವನು ಬಹಿರಂಗ ವ್ಯವಹಾರ ದೂರಸ್ಥನು ಎಂಬ ಸತ್ಯವನ್ನು ಅರಿಯುವುದು.ಒಂದು ವಿಮಾನ ನಿಲ್ದಾಣಕ್ಕೆ ವಿಮಾನ ಹಾರಾಟಕ್ಕೆ ರನ್ ವೆ ಎಷ್ಟು ಮುಖ್ಯವೋ ಅದಿಲ್ಲದೆ ವಿಮಾನ ಹಾರುವುದಲ್ಲವೋ, ಹೇಗೆ ವಿಮಾನ ರನ್ ವೇ ಮೇಲೆ ಸ್ವಲ್ಪ ಕ್ರಮಿಸಿ ಬಾನೆತ್ತರಕ್ಕೆ ಹಾರುವುದೋ ಹಾಗೆಯೇ ನಾವು ದೇವನನ್ನು ಸಾಕ್ಷಾತ್ಕಾರ ಗೊಳಿಸುವ ಸಲುವಾಗಿ ಪೂಜೆಯನ್ನು ಮಾಡಬೇಕು ಪೂಜೆ ಮಾಡುತ್ತ ಮಾಡುತ್ತ ದೇವನನ್ನು ಒಲಿಸುವ ಪರಿ ಯನ್ನು ಕಂಡುಕೊಂಡು ಅವನು ಬಹಿರಂಗ ವ್ಯವಹಾರ ದೂರಸ್ಥ ಎಂಬ ಸತ್ಯವನ್ನು ಅರಿಯುವುದು ಹಾಗೂ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವುದು.
  ಪೂಜೆ : ಪೂಜೆ ಎಂದರೆ ಹೂಜೆ.
  ಹೂವನ್ನು ದೇವರಿಗೆ ಏರಿಸುವುದು, ಅರ್ಪಿಸುವುದು.
  ಹೂವನ್ನು ದೇವರಿಗೆ ಏರಿಸುವುದು ಎಂದರೆ ಗಿಡದಿಂದ ಬಳ್ಳಿಗಳಿಂದ ಹೂವನ್ನು ಕಡಿದು ದೇವರಿಗೆ ಏರಿಸುವುದು ಅಲ್ಲ ನಾವೇ ಹೂವಾಗಿ ಹೂವಲ್ಲಿ ತುಂಬಿ , ತಮ್ಮ ತನವನ್ನು ಹೂವಿನಲ್ಲಿ ತುಂಬಿ, ನಮ್ಮ ಅಸ್ತಿತ್ವವನ್ನು ತುಂಬಿ ದೇವನ ಪಾದಗಳಿಗೆ ಅರ್ಪಿಸುವುದೇ ಪೂಜೆ.
  ಆದರಿಂದ ಅಷ್ಟವಿಧ ಅರ್ಚನೆಯನ್ನು ಮಾಡಿ ಬಹಿರಂಗ ವ್ಯವಹಾರ ದೂರಸ್ಥ ನಾದ ಶಿವನನ್ನು ಕಾಣಬೇಕು ಎನ್ನುವ ಭಾವ.
  ಸಂಗ್ರಹ : ಸಿದ್ದಲಿಂಗ ಎಸ್. ಸ್ವಾಮಿ ಉಚ್ಚ ತಾ. ಭಾಲ್ಕಿ ಜಿ. ಬೀದರ