ಕುಲ ಸಂಘರ್ಷಕ್ಕೆ ದಾಸಸಾಹಿತ್ಯ ಪ್ರತಿರೋಧ

ಕೋಲಾರ,ನ,೧೨- ಕನಕದಾಸರು ವರ್ಗ ಸಂಘರ್ಷಕ್ಕೆ ದಾಸ ಸಾಹಿತ್ಯದ ಮೂಲಕ ಪ್ರತಿರೋಧವನ್ನು ವ್ಯಕ್ತಪಡಿಸಿ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದರೆಂದು ಭಾರತ ಸೇವಾದಳ ಜಿಲ್ಲಾ ಗೌರವಾಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.
ನಗರದ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ದಾಸಶ್ರೇಷ್ಟ ಕನಕದಾಸರ ೫೩೫ ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಐದಾರು ಶತಮಾನಗಳ ಹಿಂದೆಯೇ ಕನಕದಾಸರು ದಂಡನಾಯಕರಾಗಿ ಶ್ರೀಮಂತಿಕೆಯಲ್ಲಿದ್ದರೂ ಎಲ್ಲವನ್ನು ತ್ಯಜಿಸಿ ದಾಸರಾಗಿ ಮಾರ್ಪಟ್ಟು ಸಮಾಜ ಅಂಕು ಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ್ದರು, ಅವರ ಆದರ್ಶವನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂದರು.
ಅಧ್ಯಕ್ಷತೆವಹಿಸಿದ್ದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಮನುಷ್ಯರೆಲ್ಲರೂ ಸಮಾನರೆಂದು ಸಾರಿದ ಕನಕದಾಸರು ಮತ್ತು ಅವರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿದೆ, ಅವರ ಆಶಯಗಳನ್ನು ಆರ್ಥೈಸಿಕೊಂಡು ನೆಲೆ ಇಲ್ಲದ ಕುಲಕ್ಕೆ ಜೋತು ಬೀಳದೆ ಮಾನವ ಕುಲವೆಲ್ಲಾ ಒಂದೇ ಎಂಬ ತತ್ವವನ್ನು ಪಾಲಿಸಬೇಕೆಂದರು.
ಮುಂದಿನ ದಿನಗಳಲ್ಲಿ ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ವಿವಿಧ ಸೇವಾ ಕಾರ್ಯಕ್ರಮಗಳ ಮೂಲಕ ಜಿಲ್ಲಾ ಮತ್ತು ತಾಲೂಕು ಸಮಿತಿಯಿಂದ ಆಚರಿಸಲು ಯೋಜಿಸಲಾಗುವುದು ಎಂದರು.
ಭಾರತ ಸೇವಾದಳ ತಾಲೂಕು ಸಮಿತಿ ಅಧ್ಯಕ್ಷ ಶ್ರೀರಾಮ್ ಮತ್ತು ಕಾರ್ಯದರ್ಶಿ -ಲ್ಗುಣ ಮಾತನಾಡಿ, ಜಾತಿ ಸಂಘರ್ಷವನ್ನು ಕನಕದಾಸರ ಆದರ್ಶದಲ್ಲಿ ತೊರೆಯಬೇಕೆಂದರು.ಭಾರತ ಸೇವಾದಳ ಉಪಾಧ್ಯಕ್ಷ ಮುನಿವೆಂಕಟ್ ಮಾತನಾಡಿ, ಪಂಚಭೂತಗಳಿಗೆ ಇಲ್ಲದ ಬೇಧಭಾವ ಮನುಜನಿಗೇಕೆ ಎಂದು ಕನಕದಾಸರು ಕೀರ್ತನೆಗಳಲ್ಲಿ ಸಾರಿ ಹೋಗಿದ್ದಾರೆ. ನಾವು ಹಾಗೆ ಬದುಕಬೇಕಷ್ಟೇ ಎಂದರು.
ಭಾರತ ಸೇವಾದಳ ಸಂಚಾಲಕ ಗೋಕುಲ ಚಲಪತಿ ಮಾತನಾಡಿ, ಜಾತಿ ಬಿಡಬೇಕು, ಕುಲ ಕುಲ ಎಂದು ಹೊಡೆದಾಡದಿರಿ ಎಂಬ ಮಾತುಗಳು ಕೇವಲ ವೇದಿಕೆಗೆ ಸೀಮಿತವಾಗದೆ ನಿಜ ಅರ್ಥದಲ್ಲಿ ಪ್ರತಿಯೊಬ್ಬ ಮನುಷ್ಯರೂ ಪಾಲಿಸುವಂತಾಗಬೇಕೆಂದರು.
ಕಾರ್ಯಕ್ರಮದಲ್ಲಿ ಸೇವಾದಳ ಪದಾಧಿಕಾರಿಗಳಾದ ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್, ಕೆ.ಜಯದೇವ್, ಸಂಪತ್, ಆಂಥೋನಿ, ಜ್ಯೂಸ್ ನಾರಾಯಣಸ್ವಾಮಿ, ಚಾನ್‌ಪಾಷಾ ಇತರರು ಭಾಗವಹಿಸಿದ್ದರು.
ಭಾರತ ಸೇವಾದಳ ಜಿಲ್ಲಾ ಸಂಘಟಕ ದಾನೇಶ್ ಕಾರ್ಯಕ್ರಮ ನಿರೂಪಿಸಿದರು. ಸೇವಾದಳ ಸರ್ವಧರ್ಮ ಪ್ರಾರ್ಥನೆಯಿಂದ ಆರಂಭವಾದ ಕಾರ್ಯಕ್ರಮವು ರಾಷ್ಟ್ರಗೀತೆ ಗಾಯನದೊಂದಿಗೆ ಪೂರ್ಣಗೊಂಡಿತು.