ಕುಲಪತಿ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ

ಸಂಜೆವಾಣಿ ನ್ಯೂಸ್
ಮೈಸೂರು: ಸೆ.14:- ಮೈಸೂರು ವಿಶ್ವವಿದ್ಯಾಲಯಕ್ಕೆ ಕೂಡಲೇ ಕುಲಪತಿ ನೇಮಕ ಮಾಡುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಕ್ರಾರ್ಫರ್ಡ್ ಭವನದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಮೈಸೂರು ವಿಶ್ವವಿದ್ಯಾಲಯ ರಾಜ್ಯದ ಪ್ರತಿಷ್ಠಿತ ವಿವಿಗಳಲ್ಲಿ ಒಂದಾಗಿದ್ದು ತನ್ನದೇ ಆದ ಇತಿಹಾಸ ಹೊಂದಿದೆ. ವಿವಿ ಅನೇಕ ಸಾಧಕರನ್ನು ದೇಶಕ್ಕೆ ನೀಡಿದೆ. ಇಂತಹ ವಿವಿಯಲ್ಲಿ ಕಳೆದ ಮೂರು ತಿಂಗಳಿನಿಂದ ಕುಲಪತಿಯಿಲ್ಲದೇ ಕಾರ್ಯಚಟುವಟಿಕೆಗಳು ಕುಂಠಿತಗೊಂಡಿವೆ. ಅಲ್ಲದೆ ಕುಲಪತಿಯಿಲ್ಲದೇ ವಿವಿಯ ಘನತೆಗೆ ಧಕ್ಕೆಯಾಗಿದೆ. ಈ ರೀತಿಯ ವಿಳಂಬದಿಂದಾಗಿ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಶೈಕ್ಷಣಿಕ ಚಟುಚಟಿಕೆಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳು ಎದುರಾಗಿವೆ. ಕುಲಪತಿ ನೇಮಕ ವಿಳಂಬ ಸರ್ಕಾರ ಹಾಗೂ ವಿವಿಯ ಆಡಳಿತ ಮಂಡಳಿಯ ವೈಫಲ್ಯ ಹಾಗೂ ವಿದ್ಯಾರ್ಥಿ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಕಿಡಿ ಕಾರಿದರು.
ಸರ್ಕಾರ ಹಾಗೂ ರಾಜ್ಯಪಾಲರು ಇತ್ತ ಗಮನಹರಿಸಿ ಕೂಡಲೇ ಕುಲಪತಿ ನೇಮಕ ಮಾಡಿ ವಿವಿಯ ಗೌರವ, ಘನತೆ ಕಾಪಾಡಬೇಕು. ವಿದ್ಯಾರ್ಥಿಗಳ ಸಮಸ್ಯೆ, ಗೊಂದಲಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಐಶ್ವರ್ಯ, ದತ್ತ, ಸುಪ್ರೀತ್, ಹರ್ಷದೇವ, ಪ್ರೀತಂ, ಹೇಮ, ಪ್ರಜ್ವಲ್, ಆದರ್ಶ, ದಿನೇಶ, ಶ್ರೀಕಂಠ, ಆಕಾಶ್, ಶ್ರೇಯಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.