ಕುರುಬರ ಹಾಸ್ಟೆಲ್ ಮೇಲೆ ದಾಳಿ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹ

ಸಂಜೆವಾಣಿ ನ್ಯೂಸ್
ಮೈಸೂರು: ಜ.31:- ಮಂಡ್ಯ ಜಿಲ್ಲೆಯಲ್ಲಿ ಪಂಚಾಯಿತಿ ಕಚೇರಿಯಲ್ಲಿ ಹನುಮ ಧ್ವಜ ಹಾರಿಸಿದ ಘಟನೆ ಬಳಿಕ ಇಡೀ ಮಂಡ್ಯದಲ್ಲಿ ಕೋಮು ಗಲಭೆ ನಡೆಯುವಂತೆ ನೋಡಿಕೊಳ್ಳಲು ಬಿಜೆಪಿ ಪ್ರಚೋದನೆ ನೀಡಿತ್ತು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರ ಫ್ಲೆಕ್ಸ್ ಹರಿದುದು, ಮಂಡ್ಯದ ಕುರುಬರ ಸಂಘದ ಹಾಸ್ಟೆಲ್‍ಗೆ ಕಲ್ಲು ತೂರಿದ ಘಟನೆ ನಡೆದಿವೆ. ಇದು ಖಂಡನೀಯವಾಗಿದ್ದು, ಸಂಬಂಧಿಸಿದವರು ಈ ಘಟನೆಯಲ್ಲಿ ಪಾಲ್ಗೊಂಡವರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಗರ, ಜಿಲ್ಲಾ ಶೋಷಿತ ವರ್ಗದ ಸಮುದಾಯಗಳ ಒಕ್ಕೂಟ ಆಗ್ರಹಿಸಿದೆ.
ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಈ ಮುಖಂಡರೊಡನೆ ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ಪಂಚಾಯತ್‍ನಲ್ಲಿ ರಾಷ್ಟ್ರೀಯ, ರಾಜ್ಯದ ಧ್ವಜ ಹಾರಿಸಲಷ್ಟೇ ಅನುಮತಿ ಇದೆ. ಆದರೆ ಹನುಮ ಧ್ವಜ ಹಾರಿಸಿದುದು ಅಕ್ಷಮ್ಯ. ಹೀಗಾಗಿ ಸಂಬಂಧಿಸಿದವರು ಕ್ರಮ ಕೈಗೊಂಡರು.
ಇದನ್ನೇ ನೆಪವಾಗಿರಿಸಿಕೊಂಡು ಒಂದು ಸಮುದಾಯದ ಹಾಸ್ಟೆಲ್‍ಗೆ ಕಲ್ಲು ತೂರಿದುದು ಸರಿಯಲ್ಲ. ಇದು ರಾಜಕೀಯ ಪ್ರೇರಿತ ಘಟನೆಯಾಗಿದೆ. ಯಾವ ಪಕ್ಷ ಇದರ ಹಿಂದಿದೆ ಎಂಬುದು ಎಲ್ಲರಿಗೂ ತಿಳಿದುದೇ ಆಗಿದೆ. ಚುನಾವಣಾ ಉದ್ದೇಶಕ್ಕೆ ಸಮುದಾಯ, ಜಾತಿಗಳ ನಡುವೆ ಈ ರೀತಿ ಧ್ವೇಷ ಬಿತ್ತುವುದು ಕೀಳು ರಾಜಕೀಯವಾಗಿದೆ ಎಂದು ಕಿಡಿಕಾರಿದರು.
ಬಳಿಕ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಕರ್ನಾಟಕ ಶಾಂತಿಗೆ ಹೆಸರಾದ ರಾಜ್ಯವಾಗಿದೆ. ಇಲ್ಲಿ ಈ ರೀತಿಯ ಗಲಭೆ ಸೃಷ್ಟಿಸಲು ಯತ್ನಿಸಿದರೆ ಜನತೆ ಮರುಳಾಗುವುದಿಲ್ಲ. ಆದರೆ ಬಿಜೆಪಿ ಮುಖಂಡರ ಕೆಲಸ ಇದೇ ಆಗಿದೆ. ಈ ಹಿಂದೆ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ ಸಂಸದ ಪ್ರತಾಪ್‍ಸಿಂಹ ಅವರಿಗೆ, ಬೆಂಕಿ ಹಚ್ಚಿದ ಎಷ್ಟು ಗಲಭೆ ಮಾಡಿಸಿದ್ದೀರಿ, ಎಷ್ಟು ಗೋಲಿಬಾರ್ ಆಗಿವೆ ಎಂದು ಕೇಳಿದುದೇ ಇದಕ್ಕೆ ಸಾಕ್ಷಿಯಾಗಿದೆ. ಬಿಜೆಪಿಯವರು ಕೇವಲ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಬೇಕೇ ಹೊರತು ಜಾತಿ ಜಾತಿ, ಧರ್ಮ ಧರ್ಮಗಳ ನಡುವೆ ಸಂಘರ್ಷವುಂಟು ಮಾಡುವುದಲ್ಲ ಎಂದರು.
ನಂತರ, ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ಮಂಡ್ಯದಲ್ಲಿ ನಡೆದ ಘಟನೆಯಲ್ಲಿ ತರಬೇತು ಪಡೆದು ಬಂದ ಹೊರಗಿನವರು ಪಾಲ್ಗೊಂಡಿದ್ದಾರೆ. ಹಾಸ್ಟೆಲ್ ಮೇಲೆ ಕಲ್ಲು ತೂರಿದ ಘಟನೆ ಬಳಿಕ ವಿದ್ಯಾರ್ಥಿಗಳು ಅಲ್ಲಿಗೆ ವಾಪಸಾಗಲು ಹೆದರುತ್ತಿದ್ದಾರೆ. ಹೀಗಾಗಿ ಕೂಡಲೇ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ವಿವಿಧ ಸಮುದಾಯಗಳ ಮುಖಂಡರಾದ ಶಿವಣ್ಣ, ಕೆ.ಎಸ್. ಶಿವರಾಮು, ದ್ಯಾವಪ್ಪನಾಐಕ, ನಾಗಭೂಷಣ್, ಶಿವಪ್ಪ ಹಾಗೂ ಇನ್ನಿತರರು ಹಾಜರಿದ್ದರು.