ಕುರುಬರ ಹಕ್ಕು ಪಡೆಯಲು ಹೋರಾಟ ಅನಿವಾರ್ಯ

ಹುಬ್ಬಳ್ಳಿ ನ 9 : ಕುರುಬ ಸಮಾಜಕ್ಕೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುನ್ನೆಲೆಗೆ ಬರಲು ಎಸ್.ಟಿ. ಮೀಸಲಾತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕಾಗಿನೆಲೆಯಿಂದ ಬೆಂಗಳೂರು ಪಾದಯಾತ್ರೆ ಹಮ್ಮಿಕೊಂಡಿದ್ದು, ನಮ್ಮ ಹಕ್ಕು ಪಡೆಯಲು ಹೋರಾಟ ಅನಿವಾರ್ಯವಾಗಿದೆ ಎಂದು ಮಾಜಿ ಸಂಸದ ಹಾಗೂ ಎಸ್.ಟಿ ಹೋರಾಟ ಸಮಿತಿ ಅಧ್ಯಕ್ಷ ಕೆ.ವಿ.ವಿರುಪಾಕ್ಷಪ್ಪ ಹೇಳಿದರು.
ಶನಿವಾರದಂದು ನಗರದ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಕುರುಬ ಸಮಾಜವನ್ನು ಎಸ್.ಟಿ.ಗೆ ಸೇರಿಸಬೇಕೆಂದು ಹಮ್ಮಿಕೊಂಡಿರುವ ಪಾದಯಾತ್ರೆಯ ಪೂರ್ವ ಸಿದ್ಧತೆ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಬೆಳಗಾವಿ ವಿಭಾಗ ಮಟ್ಟದ ಸಮಾವೇಶವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಕುರುಬರ ಎಸ್.ಟಿ ಹೋರಾಟ ಸಮಿತಿ ಸಂಘಟನೆ ರಾಜ್ಯ ಕಾರ್ಯದರ್ಶಿ ಸಿದ್ದಣ್ಣ ತೇಜಿ ಮಾತನಾಡಿ, ಕುರುಬ ಸಮಾಜ ಅಲೆಮಾರಿಗಳಾಗಿದ್ದು, ಶಿಕ್ಷಣ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದ ಜನಾಂಗವಾಗಿದೆ.
ಹತ್ತಾರು ಬಾರಿ ಹೋರಾಟ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಕೊಟ್ಟರೂ ಕೂಡ ಸರಿಪಡಿಸದೇ ಇರುವುದರಿಂದ ಹೋರಾಟ ಅನಿವಾರ್ಯ ಎಂದಿದ್ದಾರೆ.
ರಾಜ್ಯದಲ್ಲಿ ಇದೇ 22 ರಂದು ಮೊದಲ ಸಮಾವೇಶ ಬಾಗಲಕೋಟೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಕುರುಬ ಸಮಾಜವನ್ನು ಎಸ್.ಟಿ.ಗೆ ಸೇರಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಎಸ್.ಟಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಈ. ಕಾಂತೇಶ, ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶ ಮೂರ್ತಿ, ಬೆಳಗಾವಿಯ ರಾಜೇಂದ್ರ ಸಣ್ಣಕ್ಕಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ನಿರ್ದೇಶಕರಾದ ಬಸವರಾಜ ಮಲಕಾರಿ, ಅನೇಕಲ್ ದೊಡ್ಡಯ್ಯ, ರಾಜೇಶ್ವರಿ ಸಾಲಗಟ್ಟಿ, ಕಾಶಿನಾಥ ಹುಡೇದ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.