ಕುರುಬರ ಸಂಸ್ಕೃತಿ ದರ್ಶನ ಮಾಲಿಕೆ ಲೋಕಾರ್ಪಣೆ

ದಾವಣಗೆರೆ.ಜು.18; ಕುರುಬ ಸಮಾಜದ ಹಲವರಿಗೆ ಸಮುದಾಯದ ಇತಿಹಾಸವೇ ತಿಳಿದಿಲ್ಲ. ಹೀಗಾಗಿ ಸಮಾಜದ ನವ ಪೀಳಿಗೆಗೆ ಸಮುದಾಯದ ಇತಿಹಾಸ ಪ್ರಜ್ಞೆ ಮೂಡಬೇಕೆಂದರೆ ಗ್ರಂಥಗಳ ಅಧ್ಯಯನ ಅಗತ್ಯವಿದೆ ಎಂದು ಹರಿಹರ ಶಾಸಕ ಎಸ್. ರಾಮಪ್ಪ ಅಭಿಪ್ರಾಯಪಟ್ಟರು.ಇಲ್ಲಿನ ವಿದ್ಯಾನಗರ ರಸ್ತೆಯ ಕುವೆಂಪು ಕನ್ನಡ ಭವನದಲ್ಲಿ  ಕುರುಬರ ಸಾಂಸ್ಕೃತಿಕ ಪರಿಷತ್ತು ಹಾಗೂ ಜಿಲ್ಲಾ ಕುರುಬ ಸಮಾಜದ ಎಲ್ಲ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆಯ ೧೩ ಗ್ರಂಥಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಹನ್ನೆರಡು ವರ್ಷ ಬಳಿಕ ಹೊರ ತಂದ ೧೩ ಗ್ರಂಥಗಳನ್ನು ಪ್ರತಿಯೊಬ್ಬರೂ ಓದಬೇಕು. ಸಮಾಜದ ಮೃದುತ್ವ ಹಾಗೂ ಸಾಧನೆಯನ್ನು ಮಕ್ಕಳಿಗೂ ವಿವರಿಸಬೇಕೆಂದು ಆಶಿಸಿದರು.ಕಾಳಿದಾಸ, ಕನಕದಾಸ ಹಾಗೂ ಸಂಗೊಳ್ಳಿರಾಯಣ್ಣ ಮೊದಲಾದ ಸಮಾಜದ ಪ್ರಮುಖರು ಕುರುಬರನ್ನು ಮಾತ್ರವಲ್ಲದೆ ಇತರೆ ಸಮಾಜದವರನ್ನೂ ಎಚ್ಚರಿಸಿದ್ದಾರೆ. ಮಾರ್ಗದರ್ಶನ ನೀಡಿದ್ದಾರೆ ಎಂದರು. ಆ.೩ರಂದು ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯ ಅವರ ಜನ್ಮದಿನದ ಅಮೃತಮಹೋತ್ಸವದಲ್ಲಿ ಕುರುಬರು ಹೆಚ್ಚು ಭಾಗವಹಿಸಬೇಕು ಎಂದು ಮನವಿ ಮಾಡಿದರು. ಜಾನಪದ ತಜ್ಞ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಮಾತನಾಡಿ ಈ ಕಾರ್ಯಕ್ರಮ ಸಮುದಾಯಗಳ ಸಮನ್ವಯತೆಗೆ ಸಾಕ್ಷಿಯಾಗಿದೆ. ಇದರೊಂದಿಗೆ ಸಮಾಜದಲ್ಲಿ ಇಂದು ಧರ್ಮ ಸಮನ್ವಯತೆಯೂ ಬೇಕಿದೆ. ಧರ್ಮದಲ್ಲಿ ರಾಜಕಾರಣದ ಅಪವಿತ್ರ ಮೈತ್ರಿಯಿಂದಾಗಿ ಹಿಜಾಬ್, ಹಲಾಲ್, ಜಟಕಾ ಕಟ್ ಮೊದಲಾದ ವಿಚಾರಗಳು ಮುನ್ನೆಲೆಗೆ ಬರುತ್ತಿವೆ ಜನರ ಜೀವಗಳು ಬಲಿಯಾಗುತ್ತಿವೆ ಎಂದು ವಿಷಾದಿಸಿದರು. ಕುರುಬ ಸಮಾಜದ ೧೦ ಸಂಪುಟದಲ್ಲಿ ಕುಲದ ಚರಿತ್ರೆ ಅನಾವರಣಗೊಳಿಸಿರುವುದು ಪ್ರತಿ ಸಂಸ್ಕೃತಿಯ ನಿರ್ಮಾಣವಾಗಿದೆ. ಎಲ್ಲ ತಳಸಮುದಾಯಗಳು ತಮ್ಮ ಕುಲದ ಚರಿತ್ರೆಯನ್ನು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇಂದಿದೆ. ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಕುಲ ಚಿಹ್ನೆಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು. ಕಂಬಳಿ ಎಂಬುದು ತುಪ್ಪಳದ ವಸ್ತು ಮಾತ್ರವಲ್ಲ. ಸಾಂಸ್ಕೃತಿಕ ಗುರುತು. ದಾವಣಗೆರೆಯಲ್ಲಿ ತಯಾರಾಗುತ್ತಿದ್ದ ಉತ್ಕೃಷ್ಟ ಕಂಬಳಿ ಈಸ್ಟ್ ಇಂಡಿಯಾ ಕಂಪನಿಗೂ ರವಾನೆಯಾಗುತ್ತಿತ್ತು ಎಂಬುದಾಗಿ ೨೦೦ ವರ್ಷದ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ಪ್ರಾನ್ಸಿಸ್ ಬುಕನನ್ ವಿವರಿಸಿದ್ದಾನೆ. ನಮ್ಮ ಸಾಂಸ್ಕೃತಿಕ ಬೇರನ್ನು ಗುರುತಿಸಿಕೊಳ್ಳಬೇಕಿದೆ ಎಂದರು.ಕುರುಬರ ಸಾಂಸ್ಕೃತಿಕ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿ, ಬೆಂಗಳೂರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಕಾರ್ಯಕ್ರಮ ಮಾಡಿದ್ದೇವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ದಾವಣಗೆರೆ ವೇದಿಕೆ ಆಗುತ್ತಿದೆ. ಕುರುಬರು, ಗೊಲ್ಲರು ಹಾಗೂ ನಾಯಕ ಸಮಾಜದ ನಡುವೆ ಉತ್ತಮ ಒಡನಾಟವಿದೆ ಎಂದು ತಿಳಿಸಿದರು. ಯೋಜನಾ ನಿರ್ದೇಶಕ ಕಾ.ತ.ಚಿಕ್ಕಣ್ಣ ಮಾತನಾಡಿ ೧೫ ಸಂಪುಟದಡಿ ಪುಸ್ತಕಗಳ ಬಿಡುಗಡೆಗೆ ಯೋಜಿಸಲಾಗಿತ್ತು. ಈಗ ೧೦ ಸಂಪುಟದಡಿ, ೬೪೪೦ ಪುಟಗಳುಳ್ಳ ೧೩ ಗ್ರಂಥ ಹೊರತರಲಾಗಿದೆ. ಇವು ಕುರುಬ ಸಮಾಜಕ್ಕೆ ಮೀಸಲಾಗಿಲ್ಲ. ಪಶುಪಾಲನೆ ಅವಲಂಬಿತ ಸಮಾಜಗಳಿಗೆ ಪೂರಕವಾಗಿವೆ. ಇನ್ನು ಐದು ಪುಸ್ತಕ ಮುದ್ರಣವಾಗಿವೆ. ಇನ್ನೂ ೧೧ ಸಿದ್ಧವಾಗಿವೆ. ಶೀಘ್ರವೇ ಉಳಿದವನ್ನೂ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ನಿವೃತ್ತ ಪ್ರಾಧ್ಯಾಪಕ ಡಾ. ಎ.ಬಿ.ರಾಮಚಂದ್ರಪ್ಪ ಮಾತನಾಡಿ ಭಾರತದಲ್ಲಿ ಬಹುತ್ವದ ಸಂಸ್ಕೃತಿ ನಾಶಗೊಳಿಸಿ ಏಕತ್ವ ಪ್ರತಿಪಾದಿಸಲು ಒಮದು ಬಲಿಷ್ಠ ಶಕ್ತಿಕೆಲಸ ಮಾಡುತ್ತಿದೆ. ನಡಿಗೆಯಿಂದ ಉಡುಗೆವರೆಗೆ ಪ್ರಭುತ್ವ ಹಾಳುಮಾಡುತ್ತಿರುವ ಈ ಸಂದರ್ಭದಲ್ಲಿ ಸಮುದಾಯಗಳ ಸಾಂಸ್ಕೃತಿಕ ಒಳ ವಿನ್ಯಾಸಗಳ ಮೂಲಕ ಕೌಂಟರ್ ನೀಡುವ ನೀಡುವ ತುರ್ತು ಕಾಲಘಟ್ಟದ್ದಲ್ಲಿದ್ದೇವೆ ಎಂದರು.

Attachments area