
ಸಂಜೆವಾಣಿ ವಾರ್ತೆ
ತಿ.ನರಸೀಪುರ: ಆ.16:- ತಾಲೂಕು ಕುರುಬರ ಸಂಘದ ವತಿಯಿಂದ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣರ ಜಯಂತಿ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಮರೀಗೌಡ ಸ್ಮಾರಕ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಕುರುಬರ ಸಂಘದ ಮನ್ನೆಹುಂಡಿ ಮಹೇಶ್ ಮಾತನಾಡಿ, ಸಂಗೊಳ್ಳಿ ರಾಯಣ್ಣರ ಶೌರ್ಯ, ಪರಾಕ್ರಮ ಶತಶತಮಾನಗಳ ವರೆವಿಗೂ ನೆನಪು ಉಳಿಯುವಂತಹದ್ದು. ದೇಶಕ್ಕಾಗಿ ಮಡಿದ ಮಹಾನ್ ನಾಯಕರನ್ನು ಎಲ್ಲ ಸಮುದಾಯ ಸ್ಮರಿಸಿಕೊಳ್ಳಬೇಕು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿ ಮಾತನಾಡಿ, ದೇಶಕ್ಕಾಗಿ ಹೋರಾಡಿದ ರಾಯಣ್ಣರನ್ನು ನೆನಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ.ಸಂಗೊಳ್ಳಿ ರಾಯಣ್ಣ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು.ವಿದ್ಯಾರ್ಥಿ ಗಳು ಮಹಾನ್ ನಾಯಕರ ಆದರ್ಶಗಳನ್ನು ಪಾಲಿಸಬೇಕು. ಸಮುದಾಯದ ಮಕ್ಕಳನ್ನು
ಶೈಕ್ಷಣಿಕವಾಗಿ ಉತ್ತೇಜಿಸುವ ದೃಷ್ಟಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸುತ್ತಿದ್ದು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಸಮಾಜಕ್ಕೆ ಒಳ್ಳೆಯ ಹೆಸರು ತರಬೇಕು ಎಂದರು.
ಕಾಂಗ್ರೆಸ್ ಡಿಸಿಸಿ ವಕ್ತಾರ ಉಕ್ಕಲಗೆರೆ ಬಸವಣ್ಣ ಮಾತನಾಡಿ,ಸಮುದಾಯದ ಮಕ್ಕಳು ಉತ್ತಮ ಶೈಕ್ಷಣಿಕ ಅರ್ಹತೆ ಪಡೆಯಬೇಕು. ಸಮಾಜದಲ್ಲಿ ಹೆಗ್ಗುರುತು ಮೂಡಿಸಬೇಕು.ತಾಲೂಕಿನಲ್ಲಿ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಸ್ಥಾಪನೆ ಮಾಡಲು ಸಂಘದ ಮುಖಂಡರು ಒತ್ತಾಯ ಮಾಡಬೇಕು.ಸಂಘದ ಉದ್ದಾರಕ್ಕಾಗಿ ಎಲ್ಲರು ಒಗ್ಗಟ್ಟಿನಿಂದ ದುಡಿಯಬೇಕು.ಆಗಮಾತ್ರ ಸಂಘದ ಏಳಿಗೆ ಸಾಧ್ಯ ಎಂದರು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ 20ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.ವೀರ ಸೇನಾನಿ ಸಂಗೋಳ್ಳಿ ರಾಯಣ್ಣ ಪರಾಕ್ರಮ, ಹೋರಾಟ ಮನೋಭಾವದ ಬಗ್ಗೆ ಮುಖ್ಯ ಭಾಷಣಕಾರ ಕುಪ್ಯ ಪುಟ್ಟಸ್ವಾಮಿ ತಿಳಿಸಿದರು.
ಸಭೆಯಲ್ಲಿ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೊತ್ತೆಗಾಲ ಬಸವರಾಜು,ಕಾರ್ಯಧ್ಯಕ್ಷ ಮಾದೇಶ್,ಕುಪ್ಯ ಗ್ರಾ. ಪಂ.ಅಧ್ಯಕ್ಷ ರಾಮನಂಜಯ್ಯ, ವಾಟಾಳು ಗ್ರಾ.ಪಂ. ಅಧ್ಯಕ್ಷ ಸೋಮಣ್ಣ,ನಿರ್ದೇಶಕರಾದ ಕುಪ್ಯ ಭಾಗ್ಯಮ್ಮ, ಹಾಳೇಗೌಡ, ಗೋಪಾಲರಾಜು ಅಶ್ವಿನ್ ಕುಮಾರ್, ತಾಲೂಕು ಕಸಾಪ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ, ಚೌಹಳ್ಳಿ ಮಲ್ಲೇಶ್ ಕೂರುಬಾಳನಹುಂಡಿ ಮಲ್ಲೇಶ್,ಮಿನಿ ದ್ವಾರಕೀಶ್, ಜಯರಾಮು, ಚಂದ್ರಶೇಖರ್ ಇತರರು ಹಾಜರಿದ್ದರು.