ಕುರುಬರ ಎಸ್ ಟಿ ಹೋರಾಟ ಸಮಿತಿಗೆ ನಗರ ಅಧ್ಯಕ್ಷರಾಗಿ ಕೆ.ಮೋಹನ್ ನೇಮಕ

ಬಳ್ಳಾರಿ ಡಿ 31: ಹಿಂದುಳಿದಿರುವ ಕುರುಬ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸುವಂತೆ ನಡೆಯುತ್ತಿರುವ ಹೋರಾಟಕ್ಕೆ ರಚನೆಗೊಂಡಿರುವ ಬಳ್ಳಾರಿ ನಗರ ಮಟ್ಟದ ಹೋರಾಟ ಸಮಿತಿಗೆ ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಖಜಾಂಚಿಯಾಗಿರುವ ಅಲ್ಲೀಪುರ ಕೆ.ಮೋಹನ್ ಅವರನ್ನು ನಗರ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಕರ್ನಾಟಕ ರಾಜ್ಯ ಕುರುಬರ ಎಸ್.ಟಿ.ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಅಯ್ಯಳಿ ತಿಮ್ಮಪ್ಪ ಅವರು, ನೇಮಕಮಾಡಿ ಆದೇಶ ಹೊರಡಿಸಿದ್ದಾರೆ.
ತಮ್ಮ ನೇಮಕದ ಬಗ್ಗೆ ಪ್ರತಿಕ್ರಿಯೆಸಿರುವ ಕೆ.ಮೋಹನ್ ಮಾತನಾಡಿ, ಜನವರಿ 04 ರಂದು ಸಿಂಧನೂರಿನಲ್ಲಿ ವಿಭಾಗೀಯ ಮಟ್ಟದ ಸಮಾವೇಶ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ನಗರದ ಕುರುಬ ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ. ಆ ನಂತರ ಜನವರಿ 15 ರಿಂದ ಕಾಗಿನೆಲೆ ಪೀಠಾಧಿಪತಿಗಳ ನೇತೃತ್ವದಲ್ಲಿ ನಾಲ್ಕೂ ಗುರುಗಳನ್ನು ಒಳಗೊಂಡಂತೆ ಕಾಗಿನೆಲೆಯಿಂದ ಪಾದಯಾತ್ರೆ ನಡೆಯಲಿದೆ. ಅಂತಿಮವಾಗಿ ಫೆಬ್ರವರಿ 7 ರಂದು ಬೆಂಗಳೂರಿನಲ್ಲಿ ನಡೆಯುವ ಎಸ್ಟಿ ಮೀಸಲಾತಿ ಹೋರಾಟದ ಬೃಹತ್ ಸಮಾವೇಶಕ್ಕೆ ಕರ್ನಾಟಕದ ಮೂಲೆಮೂಲೆಯಿಂದ ಲಕ್ಷಾಂತರ ಜನರನ್ನ ಸೇರಿಸಿ ಸರ್ಕಾರದ ಮೇಲೆ ಒತ್ತಡ ಹೇರುವ ಯೋಜನೆಯನ್ನ ಸಮಿತಿ ಹೊಂದಿದೆ ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲಾಗುವುದು . ಸಾಮಾಜಿಕವಾಗಿ ಹಿಂದುಳಿದಿರುವ ಕುರುಬ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಎಸ್ಟಿ ಮೀಸಲಾತಿ ಅನಿವಾರ್ಯ . ಹಾಗಾಗಿ ಅದನ್ನ ಪಡೆಯುವ ತನಕ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಮೋಹನ್ ಅವರು ಸಂಜೆವಾಣಿಗೆ ತಿಳಿಸಿದ್ದಾರೆ.