ಕುರುಬರ ಎಸ್ ಟಿ ಹೋರಾಟ ಸಮಿತಿ ಸಂಘಟನಾ ಕಾರ್ಯದರ್ಶಿಯಾಗಿ ಕೆ.ಆರ್.ಮಲ್ಲೇಶ್ ಕುಮಾರ್ ನೇಮಕ

ಬಳ್ಳಾರಿ ಡಿ 31: ಹಿಂದುಳಿದಿರುವ ಕುರುಬ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸುವಂತೆ ನಡೆಯುತ್ತಿರುವ ಹೋರಾಟಕ್ಕೆ ರಚನೆಗೊಂಡಿರುವ ಬಳ್ಳಾರಿ ಜಿಲ್ಲಾ ಮಟ್ಟದ ಹೋರಾಟ ಸಮಿತಿಗೆ ಬಳ್ಳಾರಿ ಜಿಲ್ಲಾ ಕುರುಬರ ಸಂಘದ ನಿರ್ದೇಶಕರು ಆಗಿರುವ ಕೆ.ಆರ್.ಮಲ್ಲೇಶ್ ಕುಮಾರ್ ಅವರನ್ನು ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಕರ್ನಾಟಕ ರಾಜ್ಯ ಕುರುಬರ ಎಸ್.ಟಿ.ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಅಯ್ಯಳಿ ತಿಮ್ಮಪ್ಪ ಅವರು, ನೇಮಕಮಾಡಿ ಆದೇಶ ಹೊರಡಿಸಿದ್ದಾರೆ. ಈ ಸಂದರ್ಭದಲ್ಲಿ ಕುರುಬರ ಸಂಘದ ಜಿಲ್ಲಾಧ್ಯಕ್ಷ ಎಱ್ರೆಗೌಡ, ಖಜಾಂಚಿ ಅಲ್ಲೀಪುರ ಮೋಹನ್, ಸಮುದಾಯದ ಮುಖಂಡರುಗಳಾದ ಕಲ್ಲುಕಂಬ ಪಂಪಾಪತಿ, ಕೆರೆಕೋಡಪ್ಪ, ಜೋಗದ ಈಶ್ವರಪ್ಪ ಇದ್ದರು.
ತಮ್ಮ ನೇಮಕದ ಬಗ್ಗೆ ಪ್ರತಿಕ್ರಿಯೆಸಿರುವ ಮಲ್ಲೇಶ್ ಕುಮಾರ್ ಅವರು, ಜನವರಿ 04 ರಂದು ಸಿಂಧನೂರಿನಲ್ಲಿ ವಿಭಾಗೀಯ ಮಟ್ಟದ ಸಮಾವೇಶ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಕುರುಬ ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಲು ಕೋರಲಾಗಿದೆ. ಆ ನಂತರ ಜನವರಿ 15 ರಿಂದ ಕಾಗಿನೆಲೆ ಪೀಠಾಧಿಪತಿಗಳ ನೇತೃತ್ವದಲ್ಲಿ ನಾಲ್ಕೂ ಗುರುಗಳನ್ನು ಒಳಗೊಂಡಂತೆ ಕಾಗಿನೆಲೆಯಿಂದ ಪಾದಯಾತ್ರೆ ನಡೆಯಲಿದೆ. ಅಂತಿಮವಾಗಿ ಫೆಬ್ರವರಿ 7 ರಂದು ಬೆಂಗಳೂರಿನಲ್ಲಿ ನಡೆಯುವ ಎಸ್ಟಿ ಮೀಸಲಾತಿ ಹೋರಾಟದ ಬೃಹತ್ ಸಮಾವೇಶಕ್ಕೆ ಕರ್ನಾಟಕದ ಮೂಲೆಮೂಲೆಯಿಂದ ಹತ್ತು ಲಕ್ಷ ಜನರನ್ನ ಸೇರಿಸಿ ಸರ್ಕಾರದ ಮೇಲೆ ಒತ್ತಡ ಹೇರುವ ಯೋಜನೆಯನ್ನ ಸಮಿತಿ ಹೊಂದಿದೆ ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವೆ. ಸಾಮಾಜಿಕವಾಗಿ ಹಿಂದುಳಿದಿರುವ ಕುರುಬ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಎಸ್ಟಿ ಮೀಸಲಾತಿ ಅನಿವಾರ್ಯ . ಹಾಗಾಗಿ ಅದನ್ನ ಪಡೆಯುವ ತನಕ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಮಲ್ಲೇಶ್ ಹೇಳಿದ್ದಾರೆ.