ಕುರುಬರ ಎಸ್ . ಟಿ . ಮೀಸಲಾತಿ ವಿಸ್ತರಣೆ; ನ.೨೧ ಕ್ಕೆ ಬೆಂಗಳೂರು ಚಲೋ

ದಾವಣಗೆರೆ.ನ.೧೭: ಕುರುಬರ ಎಸ್ . ಟಿ . ಮೀಸಲಾತಿ ವಿಸ್ತರಣೆಗೆ ಆಗ್ರಹಿಸಿ ನವೆಂಬರ್ 21 ರಂದು ” ಬೆಂಗಳೂರು ಚಲೋ ಮೂಲಕ ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿನದ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಾಲುಮತ ಮಹಾಸಭಾ ಕಾರ್ಯಾಧ್ಯಕ್ಷ ಚಂದ್ರು ದೀಟೂರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕುರುಬ ಸಮುದಾಯಕ್ಕೆ ಎಸ್.ಟಿ , ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ.  ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ  ಮೀಸಲಾತಿ ಪಟ್ಟಿಯಲ್ಲಿ ಕುರುಬರಿಗೆ ಸಂಬಂಧಪಟ್ಟ , ರಾಜಗೊಂಡ , ಜೇನುಕುರುಬ , ಕಾಡು ಕುರುಬ , ಕಟ್ಟುನಾಯಕನ್ , ಕುರುಮನ್ಸ್ ಮತ್ತು ಕ್ರಮ ಸಂಖ್ಯೆ 28 ರಲ್ಲಿ ” ಕುರುಬ ” ಎಂಬ ಜಾತಿಗಳು ಇದ್ದರೂ ಸಹ ರಾಜ್ಯವ್ಯಾಪಿ ವಿಸ್ತಾರ ಮಾಡಿಲ್ಲ.ಈ ಅನ್ಯಾಯವನ್ನು ಸರಿಪಡಿಸಲು ಸರ್ಕಾರಗಳಿಗೆ ಮನವಿ ಮಾಡಲಾಗಿದ್ದು , ಪೂರಕವಾಗಿ 2018 ರ ಸಮ್ಮಿಶ್ರ ಸರ್ಕಾರದಲ್ಲಿ ಎಸ್ . ಟಿ . ಮೀಸಲಾತಿಗಾಗಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಕೇಂದ್ರ , ಮೈಸೂರು ಇವರಿಂದ ” ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶಿಸಿ , ಅಧ್ಯಯನವೂ ಸಂಪೂರ್ಣವಾಗಿ ಮುಗಿದಿದ್ದು , ಸರ್ಕಾರವು ಅಂಗೀಕರಿಸಿ , ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕಿದೆ ಎಂದರು.ಕಾಗಿನೆಲೆ ಮಹಾಸಂಸ್ಥಾನ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮಿಗಳು ಹಾಗೂ ಹಾಲುಮತ ಮಹಾಸಭಾದ ರಾಜ್ಯಸಮಿತಿ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ , ಮನವಿ ಮಾಡಲಾಗಿತ್ತು .ಶ್ರೀಕನಕದಾಸರ ಜಯಂತಿಯಂದು ಸರ್ಕಾರದಿಂದ ಶುಭಸುದ್ದಿಯನ್ನು ಕುರುಬ ಸಮುದಾಯ ನಿರೀಕ್ಷೆ ಮಾಡಿತ್ತು . ಆದರೆ ಮುಖ್ಯಮಂತ್ರಿಗಳು ನಿರಾಶೆ ಮಾಡಿದ್ದಾರೆ. ಮೀಸಲಾತಿಯ ವಿಷಯದಲ್ಲಿ ಮುಖ್ಯಮಂತ್ರಿಗಳು ವಿಳಂಬಮಾಡದೇ ಅಧ್ಯಯನದ ವರದಿಯನ್ನು ಅಂಗೀಕರಿಸಿ , ಕೇಂದ್ರಸರ್ಕಾರಕ್ಕೆ ಸಿಫಾರಸ್ಸು ಮಾಡಬೇಕೆಂಬ ಒತ್ತಾಯದೊಂದಿಗೆ ಧರಣಿ ನಡೆಸಲಾಗುವುದು ಎಂದರು.ನಮ್ಮ ಸಮಾಜಕ್ಕೆ ಆದ ಅನ್ಯಾಯವನ್ನು ಸರಿಪಡಿಸಿ , ಎಸ್.ಟಿ. ಮೀಸಲಾತಿ ನೀಡಿ ‘ಮುಖ್ಯಮಂತ್ರಿಗಳು ಕುರುಬ ಸಮುದಾಯದ ನ್ಯಾಯಯುತವಾದ ಬೇಡಿಕೆಯನ್ನು ಪುರಸ್ಕರಿಸಬೇಕು. ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ವಿಳಂಬವಾದಲ್ಲಿ ಚರ್ಚೆ ನಡೆಸಿ , ಆನಿರ್ದಿಷ್ಟಾವಧಿ ಧರಣಿ ನಡೆಸುವ ಬಗ್ಗೆಯೂ ತೀರ್ಮಾನ ಮಾಡಲಾಗುವುದು  ಎಂದರು.ಧರಣಿಗೆ ದಾವಣಗೆರೆ ಜಿಲ್ಲೆಯಿಂದ 2 ಸಾವಿರಕ್ಕೂ ಹೆಚ್ಚು ಸಮಾಜದ ಬಂಧುಗಳು ಸ್ವಯಂಪ್ರೇರಿತರಾಗಿ ಭಾಗವಹಿಸುತ್ತಿದ್ದಾರೆ . ರಾಜ್ಯಾದ್ಯಂತ ೨೫,೦೦೦ ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಿ. ವೀರಣ್ಣ, ಜಿ. ಷಣ್ಮುಖಪ್ಪ, ಸಲ್ಲಳ್ಳಿ ಹನುಮಂತಪ್ಪ,ಎಸ್.ಎಂ. ಸಿದ್ದಲಿಂಗಪ್ಪ ಹಾಗೂ ಆರ್.ಬಿ. ಪರಮೇಶ್ ಉಪಸ್ಥಿತರಿದ್ದರು.