ಕುರುಬರ ಎಸ್‍ಟಿ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷರಾಗಿ ಶಶಿಕಲಾ ನೇಮಕ

ಬಳ್ಳಾರಿ ಡಿ 29 : ಹಲವಾರು ರೀತಿಯಲ್ಲಿ ಸಮಾಜದಲ್ಲಿ ಹಿಂದುಳಿದಿರುವ ಕುರುಬ ಸಮುದಾಯವನ್ನು ಎಸ್ಟಿ (ಪರಿಶಿಷ್ಟ) ವರ್ಗಕ್ಕೆ ಸೇರಿಸುವಂತೆ ನಡೆಯುತ್ತಿರುವ ಹೋರಾಟಕ್ಕೆ ರಚನೆಗೊಂಡಿರುವ ಕುರುಬರ ಎಸ್‍ಟಿ ಹೋರಾಟ ಸಮಿತಿಗೆ ರಾಜ್ಯ ಉಪಾಧ್ಯಕ್ಷರನ್ನಾಗಿ ನಗರದ ಮಾಜಿ ಉಪ ಮೇಯರ್ ಕೆ.ಶಶಿಕಲಾ ಕೃಷ್ಣಮೋಹನ್ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ರಾಜ್ಯ ಕುರುಬರ ಎಸ್.ಟಿ.ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಕೆ.ವಿರೂಪಾಕ್ಷಪ್ಪ ಅವರು ಶಶಿಕಲಾ ಅವರನ್ನು ನೇಮಕ ಮಾಡಿ ಸಮುದಾಯದ ಸಂಘಟನೆಯಲ್ಲಿ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದ್ದಾರೆ.
ಸಮುದಾಯದ ಮುಖಂಡರು ಮತ್ತು ಸಮಿತಿಯು ರಾಜ್ಯ ಅಧ್ಯಕ್ಷ ವಿರುಪಾಕ್ಷಪ್ಪನವರು ತಮಗೆ ನೀಡಿರುವ ಈ ಜವಾಬ್ದಾರಿ ಬಗ್ಗೆ ಪ್ರತಿಕ್ರಿಯಿಸಿರುವ ಶಶಿಕಲಾ ಕೃಷ್ಣಮೋಹನ್ ಅವರು. ಸಮಾಜದ ಮುಖಂಡರು ನನಗೆ ಈ ಜವಾಬ್ದಾರಿ ನೀಡಿರುವುದಕ್ಕೆ ಆಭಾರಿಯಾಗಿದ್ದೇನೆ. ಅವರ ಆಶಯದಂತೆ ರಾಜ್ಯದೆಲ್ಲಡೆ ಪ್ರವಾಸ ಮಾಡಿ ಹೋರಾಟವನ್ನು ಗಟ್ಟಿಗೊಳಿಸುವ ಮತ್ತು ಈ ಕುರಿತಾದ ಮಾಹಿತಿಯನ್ನು ಸಮುದಾಯದ ಎಲ್ಲಾ ಜನತೆಗೆ ತಲುಪಿಸುವ ಕೆಲಸ ಮಾಡುವೆ ಮತ್ತು ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸಿ ಪ್ರಯತ್ನಿಸುವೆ ಎಂದಿದ್ದಾರೆ.
ಸಾಮಾಜಿಕವಾಗಿ ಹಿಂದುಳಿದಿರುವ ಕುರುಬ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಎಸ್ಟಿ ಮೀಸಲಾತಿ ಅನಿವಾರ್ಯವಾಗಿದೆ. ಹಾಗಾಗಿ ಅದನ್ನ ಪಡೆಯುವ ತನಕ ನಮ್ಮ ಹೋರಾಟ ನಡೆಯಬೇಕಿದೆ. ಕುರುಬ ಸಮಾಜವು ಕುರಿ ಸಾಕಾಣಿಕೆ, ಕಂಬಳಿ ನೇಯುವುದು, ಅಡವಿಯಲ್ಲಿ ವಾಸಿಸುವುದು ಮುಂತಾದ ಜೀವನ ಪದ್ಧತಿಗಳ ಅಂಶಗಳಿಂದ ಈಗಾಗಲೇ ಎಸ್ಟಿ ಮೀಸಲಾತಿಗೆ ಪೂರಕವಾದ ಸಂಪ್ರದಾಯದಲ್ಲೇ ಜೀವನ ನಡೆಸುತ್ತಿದೆ. ಹಾಗಾಗಿ ನಮ್ಮ ಹಕ್ಕನ್ನು ಕೇಳಲು ಈಗ ಸಮಯ ಬಂದಿದೆ. ನಮ್ಮ ಸಮುದಾಯದ ನಾಯಕರಾದ ಕೆ.ಎಸ್.ಈಶ್ವರಪ್ಪನವರನ್ನು ಒಳಗೊಂಡಂತೆ ಹೆಚ್.ಎಂ ರೇವಣ್ಣ, ಬಂಡೆಪ್ಪ ಕಾಶಂಪೂರ್, ಕೆ, ವಿರುಪಾಕ್ಷಪ್ಪ ಮತ್ತು ಜಿಲ್ಲೆಯ ಸಮುದಾಯದ ಮುಖಂಡರ ಜೊತೆ ಸಮುದಾಯದ ಸಂಘಟನೆ ಮಾಡುವುದಾಗಿ ಶಶಿಕಲಾ ಕೃಷ್ಣಮೋಹನ್ ಅವರು ಹೇಳಿದ್ದಾರೆ
ಸಿಂಧನೂರಿನಲ್ಲಿ ಜನವರಿ 04 ರಂದು ವಿಭಾಗೀಯ ಮಟ್ಟದ ಸಮಾವೇಶ ನಡೆಯಲಿದೆ. ಇದಕ್ಕೆ ಮತ್ತು ಜನವರಿ 15 ರಿಂದ ಕಾಗಿನೆಲೆ ಪೀಠಾಧಿಪತಿಗಳ ನೇತೃತ್ವದಲ್ಲಿ ನಾಲ್ಕೂ ಗುರುಗಳನ್ನು ಒಳಗೊಂಡಂತೆ ಕಾಗಿನೆಲೆಯಿಂದ ಪಾದಯಾತ್ರೆ ನಡೆಯಲಿದೆ. ಅಂತಿಮವಾಗಿ ಫೆಬ್ರವರಿ 7 ರಂದು ಬೆಂಗಳೂರಿನಲ್ಲಿ ನಡೆಯುವ ಎಸ್ಟಿ ಮೀಸಲಾತಿ ಹೋರಾಟದ ಬೃಹತ್ ಸಮಾವೇಶಕ್ಕೆ ಕರ್ನಾಟಕದ ಮೂಲೆಮೂಲೆಯಿಂದ ಲಕ್ಷಾಂತರ ಜನರನ್ನ ಸೇರಿಸಿ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ಸಮಿತಿ ಹೊಂದಿದ್ದು ಇದಕ್ಕೆ ಪೂರಕವಾಗಿ ನಾನು ಕಾರ್ಯನಿರ್ವಹಿಸುವೆ ಎಂದಿದ್ದಾರೆ.