ಕುರುಬರಿಗೆ ಎಸ್‍ಟಿ ಸೇರ್ಪಡೆಗೆ ಆಗ್ರಹಿಸಿ ಜ. 5ರಂದು ಬೃಹತ್ ಪ್ರತಿಭಟನೆ

ಕಲಬುರಗಿ:ಜ.2: ಕೇಂದ್ರ ಸರ್ಕಾರ ಕಲಬುರ್ಗಿ, ಬೀದರ್, ಯಾದಗಿರಿ ಜಿಲ್ಲೆಗಳ ಗೊಂಡ ಪರ್ಯಾಯ ಪದ ಕುರುಬ ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿ ಜನವರಿ 5ರಂದು ಬೆಳಿಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಗೊಂಡ ಕುರುಬ ಎಸ್‍ಟಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಮಹಾಂತೇಶ್ ಎಸ್. ಕೌಲಗಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಗೊಂಡ ಎಸ್‍ಟಿ ಪಟ್ಟಿಯಲ್ಲಿದ್ದು, ಕುರುಬ ಸಮಾನ ಪದವಾಗಿ ಪರಿಗಣಿಸಬೇಕು ಎಂದು ಕಳೆದ 1996ರ ಡಿಸೆಂಬರ್ 25ರಂದು ಬೀದರ್ ಜಿಲ್ಲೆಗೆ ಸಂಬಂಧಿಸಿದಂತೆ, 1997ರ ಫೆಬ್ರವರಿ 10ರಂದು ಅವಿಭಜಿತ ಕಲಬುರ್ಗಿ ಜಿಲ್ಲೆಗೆ ಸಂಬಂಧಿಸಿದಂತೆ ಅಂದಿನ ಕರ್ನಾಟಕ ಸರ್ಕಾರದ ಸಚಿವ ಸಂಪುಟದಲ್ಲಿ ಪಾಸು ಮಾಡಿ ಕೇಂಧ್ರ ಸರ್ಕಾರಕ್ಕೆ ಕಳಿಸಿಕೊಡಲಾಗಿದೆ ಎಂದರು.
ಕೇಂಧ್ರ ಸರ್ಕಾರ ಕರ್ನಾಟಕ ಸರ್ಕಾರ ಕಳಿಸಿಕೊಟ್ಟಿರುವ ಪ್ರಸ್ತಾವನೆಯನ್ನು ಗೊಂಡ ಮತ್ತು ಕುರುಬ ಎರಡೂ ಸಮಾನ ಪದದ ಕುರಿತು ಸಂಪೂರ್ಣ ಕುಲಶಾಸ್ತ್ರೀಯ ಅಧ್ಯಯನದ ವರದಿಯೊಂದಿಗೆ ಕಳಿಸಿಕೊಡಬೇಕು ಎಂದು ಕೇಳಿದಾಗ ರಾಜ್ಯ ಸರ್ಕಾರ ಮತ್ತೆ ಕಳೆದ 2014ರ ಮಾರ್ಚ್ 3ರಂದು ಸಂಪೂರ್ಣ ಕುಲಶಾಸ್ತ್ರೀಯ ಅಧ್ಯಯನದ ವರದಿಯೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೂರು ಜಿಲ್ಲೆಗಳಲ್ಲಿರುವ ಕುರುಬರಿಗೆ ಎಸ್‍ಟಿ ಮೀಸಲಾತಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕಳಿಸಿದ್ದಾರೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ಸುಮಾರು 9 ವರ್ಷಗಳ ಮೇಲ್ಪಟ್ಟು ಮೂರು ಜಿಲ್ಲೆಗಳ ಗೊಂಡ ಕುರುಬರ ಎಸ್‍ಟಿ ಮೀಸಲತಿ ವಿಷಯದ ಕುರಿತು ಹಲವಾರು ಬಾರಿ ವಿಶ್ಲೇಷಣೆ ವರದಿ ಕೇಳಿದ್ದು, ಅದನ್ನು ಸಹ ಕರ್ನಾಟಕ ಸರ್ಕಾರ ಕಳಿಸಿಕೊಟ್ಟಿದ್ದರೂ ಸಹ ಹಲವಾರು ಬಾರಿ ಕೇಂದ್ರ ಸಚಿವರಿಗೆ, ಸಂಸದರಿಗೆ ಮನವಿ ಮಾಡಿಕೊಂಡರೂ ಸಹ ಕೇವಲ ಭರವಸೆ ಸಿಕ್ಕಿದೆ ಹೊರತು ಯಾವುದೇ ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದರು.
ಜಿಲ್ಲೆಯ ಚಿಂಚೋಳಿ ಹಾಗೂ ಬೀದರ್ ಜಿಲ್ಲೆಯ ಬಸವಕಲ್ಯಾಣ್ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಹಾಗೂ ಕಳೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಅವರು ಮೂರು ಜಿಲ್ಲೆಗಳ ಕುರುಬರಿಗೆ ಗೊಂಡ ಪರ್ಯಾಯ ಪದಗಳನ್ನಾಗಿ ಪರಿಗಣಿಸಿ ಮಾಡಿಕೊಡುತ್ತೇವೆ. ನೀವು ನಮಗೆ ಮತಕೊಡಿ ಎಂದು ಮತಪಡೆದು ಆಯ್ಕೆಯಾಗಿ ಗೊಂಡ- ಕುರುಬರ ಎಸ್‍ಟಿ ಮೀಸಲಾತಿಯನ್ನು ನೀಡದೇ ವಿನಾಕಾರಣ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಈ ಸಂಬಂಧ ತಿಂಥಣಿ ಶ್ರೀ ಕಾಗಿನೆಲೆ ಸಂಸ್ಥಾನ ಕನಕ ಗುರು ಪೀಠದ ಸಿದ್ಧರಾಮಾನಂದ್ ಮಹಾಸ್ವಾಮೀಜಿ ನೇತೃತ್ವದಲ್ಲಿ ಗೊಂಡ- ಕುರುಬ ಹೋರಾಟ ಸಮಿತಿ ಅಡಿಯಲ್ಲಿ ಮೂರು ಜಿಲ್ಲೆಗಳ ಪ್ರತಿಯೊಂದು ತಾಲ್ಲೂಕಿನಲ್ಲಿ ಕಳೆದ ಡಿಸೆಂಬರ್ 21ರಿಂದ ಬೃಹತ್ ಪ್ರತಿಭಟನೆಗಳು ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿವೆ. ಹಾಗೆಯೇ ತಾಲ್ಲೂಕಿನಲ್ಲಿ ಜನವರಿ 5ರಂದು ಬೃಹತ್ ಹೋರಾಟ ರೂಪಿಸಲಾಗಿದೆ. ಅಂದು ಬೆಳಿಗ್ಗೆ ನಗರದ ಜಗತ್ ವೃತ್ತದಿಂದ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ನಡೆಯಲಿರುವ ಪ್ರತಿಭಟನಾ ರ್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು.
ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಅಧ್ಯಕ್ಷ ಲಕ್ಷ್ಮಣ್ ಎಸ್. ಪೂಜಾರಿ, ಕರ್ನಾಟಕ ಪ್ರದೇಶ ಕುರುಬ ಯುವ ಸಂಘದ ಜಿಲ್ಲಾಧ್ಯಕ್ಷ ಧರ್ಮರಾಜ್ ಹೇರೂರ್, ರವಿಗೊಂಡ್ ಕಟ್ಟಿಮನಿ, ಅಂಬಾರಾಯ್ ಎ. ಪೂಜಾರಿ, ಪರಮೇಶ್ ಆಲಗೂಡ್, ಶಿವಲಿಂಗ್ ವಗ್ಗಿ, ಸೂರ್ಯಕಾಂತ್ ಎ. ಪೂಜಾರಿ, ಬಾಬುರಾವ್ ಹಾಗರಗುಂಡಗಿ, ಗಂಗಾಧರ್ ಬಿ. ಧರಿಗೊಂಡ್, ಹಣಮಂತ್ ವಿ. ಪೂಜಾರಿ, ಬಂಗಾರೆಪ್ಪ ಬಿ. ಆಡಿನ್ ಮುಂತಾದವರು ಉಪಸ್ಥಿತರಿದ್ದರು.