ಕುರುಬರನ್ನು ಎಸ್ಟಿ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಸ್ವಾಗತ

ಸಂಜೆವಾಣಿ ವಾರ್ತೆ
ಗಂಗಾವತಿ, ಜು.29: ಕುರುಬ ಸಮಾಜವನ್ನು ಎಸ್ಟಿ ಸೇರ್ಪಡೆ ಮಾಡಲು ಹಿಂದಿನ ಬಿಜೆಪಿ ಸರಕಾರ ಸಿದ್ಧ ಮಾಡಿದ್ದ ವರದಿಯನ್ನು ಪ್ರಸ್ತುತ ಕಾಂಗ್ರೆಸ್ ಸರಕಾರ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದನ್ನು ಸ್ವಾಗತಿಸುವ ಜತೆಗೆ ಕೇಂದ್ರ ಸರಕಾರ ಬೇಗನೆ ಎಸ್ಟಿ ಪಟ್ಟಿಗೆ ಕುರುಬ ಸಮಾಜವನ್ನು ಪರಿಗಣಿಸುವಂತೆ ಕುರುಬ ಸಮಾಜದ ಅಧ್ಯಕ್ಷ ವಿಠಲಾಪೂರ ಯಮನಪ್ಪ ಎಸ್ಟಿ ಹೋರಾಟ ಸಮಿತಿ ಅಧ್ಯಕ್ಷ ನವಲಿ ಯಮನಪ್ಪ ದಳಪತಿ ಮನವಿ ಮಾಡಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ  ಮಾತನಾಡಿ, ಕಾಗಿನೆಲೆ ರೇವಣಸಿದ್ದೇಶ್ವರ ಸಂಸ್ಥಾನದ ಹಿರಿಯ ಮತ್ತು ಕಿರಿಯ ಸ್ವಾಮೀಜಿಗಳ ವಿಶೇಷ ಕಾಳಜಿ, ಸಮಾಜ ಬಾಂಧವರ ನಿರಂತರ ಹೋರಾಟದ ಫಲ, ಮಾಜಿ ಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ, ಹೆಚ್.ಎಂ ರೇವಣ್ಣ ಹಾಗು ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಇವರ ಮುಂದಾಳತ್ವದಲ್ಲಿ  ಕುರುಬ ಸಮಾಜ ಎಸ್ಟಿ ಸೇರ್ಪಡೆ ಕುರಿತು ನಿರಂತರ ಹೋರಾಟದ ಫಲವಾಗಿ ಹಿಂದಿನ ಬಿಜೆಪಿ ಸರಕಾರ ಅಗತ್ಯ ಕ್ರಮಕೈಗೊಂಡಿದ್ದು ಪ್ರಸ್ತುತ ಕುಲಶಾಸ್ತ್ರೀಯ ಅಧ್ಯಾಯನ ಮಾಡಿ ಅಗತ್ಯ ದಾಖಲೆಗಳ ಸಮೇತ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದು ಬೇಗನೆ ಕೇಂದ್ರ ಸರಕಾರ ವರದಿ  ಸ್ಪಂದಿಸಿ ಕುರುಬರನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು. ಕುರುಬ ಸಮಾಜದಲ್ಲಿನ ಎಲ್ಲಾ ಸಮುದಾಯಗಳು, ರಾಜ್ಯದ ಎಲ್ಲ ಪ್ರಾಂತ್ಯದಲ್ಲಿರುವವರು ಬುಡಕಟ್ಟು ಜನಾಂಗದ ಸಂಸ್ಕøತಿ ಹೊಂದಿದ್ದು, ಮೀಸಲಾತಿಗೆ ಹತ್ತಿರವಾದ ಸಮುದಾಯವೆಂದು ಕುಲಶಾಸ್ತ್ರೀಯ ಅಧ್ಯಯನದಲ್ಲಿ ತಿಳಿಸಲಾಗಿದೆ, ಅಲೆಮಾರಿಗಳಾಗಿ ಕುರಿಗಳನ್ನು ಮೇಯಿಸುತ್ತಾ ಹೋಗುವ ನಮ್ಮ ಸಮುದಾಯ ಸಾಕಷ್ಟು ಕಷ್ಟದ ಜೀವನ ನಡೆಸುತ್ತಿದೆ ಕೇಂದ್ರ ಸರಕಾರ ಆದಷ್ಟು ಬೇಗ ಮೀಸಲಾತಿ ಒದಗಿಸುವ ಮೂಲಕ ಸಮಾಜದ  ಪ್ರಗತಿಗೆ ಸಹಕಾರ ನೀಡಬೇಕು. 1871 ರಲ್ಲಿ ಇಂಗ್ಲೀಷ್ ಆಡಳಿತದ ಅವಧಿಯಲ್ಲಿ ಕುರುಬ ಸಮುದಾಯದ ಬುಡಕಟ್ಟು ಸಂಂಪ್ರದಾಯ ಗಮನಿಸಿ ಎಸ್ಟಿ ಮೀಸಲಾತಿ ಕಲ್ಪಿಸಲಾಗಿತ್ತು. 1971 ವರೆಗೂ ಈ ಮೀಸಲಾತಿ ಇತ್ತು. ಕೆಲವು ಕಾರಣಕ್ಕಾಗಿ ರಾಜ್ಯದ ಕೆಲವು ಜಿಲ್ಲೆಗಳಿಗೆ ಕುರುಬರಿಗೆ ಎಸ್ಟಿ ಮೀಸಲು ಉಳಿಸಿ ಬಹುತೇಕ ಜಿಲ್ಲೆಗಳಲ್ಲಿ ತೆಗೆದುಹಾಕಲಾಗಿದೆ. 1986 ರಿಂದ ನಿರಂತರ ಹೋರಾಟದ ಫಲವಾಗಿ ಇದೀಗ ಕೇಂದ್ರಕ್ಕೆ ವರದಿ ಶಿಫಾರಸ್ಸಾಗಿದ್ದು 2ಎ ಕೆಟಗರಿಯಲ್ಲಿರುವ ಜನಾಂಗದ ಮೀಸಲು ಜತೆಗೆ ಎಸ್ಟಿ ಕಲ್ಪಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕುರುಬ ಸಮಾಜದ ಮುಖಂಡರಾದ ಯಮನುಪ್ಪ ವಿಠಲಾಪುರ, ನವಲಿ ಯಮನಪ್ಪ ದಳಪತಿ, ಸಣ್ಣಕ್ಕಿ ನೀಲಪ್ಪ,  ದುರುಗಪ್ಪ ಮೋರಿ, ಡ್ಯಾಗಿ ರುದ್ರೇಶ, ಶಿವರಾಜ್ ಹೊಸಳ್ಳಿ, ತಿರುಕಪ್ಪ ಆನೆಗೊಂದಿ, ಶಿವಬಸಪ್ಪ, ವೆಂಕಟೇಶ್ ಸಿಂಗನಾಳ್ ಪುಂಡಗೌಡ, ನೀಲಕಂಠಪ್ಪ ಹೊಸಳ್ಳಿ ಇತರರಿದ್ದರು.