
ಸಂಜೆವಾಣಿ ವಾರ್ತೆ
ಕುರುಗೋಡು:ಏ.22: ಕಳೆದ ಒಂದು ತಿಂಗಳಿನಿಂದ ಉಪವಾಸ ವ್ರತ ಮಾಡುತ್ತಿದ್ದ ಮುಸ್ಲಿಂ ಬಾಂಧವರು ಶನಿವಾರ ತಾಲೂಕು ಸೇರಿದಂತೆ ಗ್ರಾಮಗಳಲ್ಲಿ ರಂಜಾನ ಹಬ್ಬವನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಸಮುದಾಯದವರು ಶುಕ್ರವಾರ ಸಂಜೆ ಚಂದ್ರ ದರ್ಶನವಾಗುತ್ತಿದ್ದಂತೆ ಶನಿವಾರ ರಂಜಾನ್ ಆಚರಣೆಗಾಗಿ ನಿರ್ಧಾರ ಕೈಗೊಂಡರು.
ತಾಲೂಕಿನ ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ಪರಸ್ಪರ ಶುಭಾಶಯ ವಿನಿಮಯ ನಡೆಯಿತು. ಮಧ್ಯಾಹ್ನ ವಿಶೇಷ ಖಾದ್ಯವಾದ ಸುರಕುರಮಾ ಸವಿದು ಹಬ್ಬ ಆಚರಿಸಿದರು.
ಮೌಲ್ವಿಗಳು ಶಾಂತಿ, ಸಮೃದ್ಧಿ, ಉತ್ತಮ ಮಳೆ ಹಾಗೂ ಬೆಳೆಗಾಗಿ ಬೇಡಿಕೊಂಡರು. ಬಡವರ ಮನೆಗಳಿಗೆ ತೆರಳಿದ ಜನರು ಬಟ್ಟೆ, ಹಣ ನೀಡಿ ಹಬ್ಬದ ಶುಭಾಶಯ ಕೋರಿದರು. ಪ್ರಾರ್ಥನೆ ನಂತರ ನಾನಾ ಧರ್ಮೀಯರಿಗೆ ಶುಭ ಕೋರಿದ ಮುಸ್ಲಿಂ ಸಮುದಾಯದವರು ಅಪ್ಪುಗೆಯ ಮೂಲಕ ಈದ್ ಮುಬಾರಕ್ ಎಂದರು.
ಅಂಗಡಿಗಳಲ್ಲಿ ಅತ್ತರ್, ಶ್ಯಾವಿಗೆ, ಬಟ್ಟೆಗಳು, ಗೃಹಾಲಂಕಾರ ವಸ್ತುಗಳ ಮಾರಾಟ ಜೋರಾಗಿತ್ತು. ಪುರುಷರು, ಮಹಿಳೆಯರು ಹಾಗೂ ಮಕ್ಕಳು ಹೊಸ ಬಟ್ಟೆ ಧರಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಮಧ್ಯಾಹ್ನ ಮನೆ ಮನೆಗಳಲ್ಲಿ ಶ್ಯಾವಿಗೆಯ ವಿಶೇಷ ಖಾದ್ಯ ಸುರ ಕುರಮಾ ಸಿದ್ಧಪಡಿಸಲಾಗಿದೆ. ಬಂಧುಗಳು, ಸ್ನೇಹಿತರನ್ನು ಆಹ್ವಾನಿಸಿ ಔತಣಕೂಟ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಧರ್ಮ ಗುರು ಶೆಟ್ಟಿ ಕಾಸಿಂ ಸಾಬ್, ಅಧ್ಯಕ್ಷ ಕೆ.ಎಸ್. ಖಾದರ್ ಬಾಷ, ಉಪಾಧ್ಯಕ್ಷ ಮುಲ್ಲಾ ಅನಿಫ್, ಕಾರ್ಯದರ್ಶಿ ಮೆಕಾನಿಕ್ ನಭಿ ಇತರರು ಇದ್ದರು.