ಕುರುಗೋಡು: ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ನಾಲ್ಕು ಅಂಗಡಿಗಳು ಭಸ್ಮ


ಸಂಜೆವಾಣಿ ವಾರ್ತೆ
ಕುರುಗೋಡು:ಮೇ.7- ಪಟ್ಟಣದ ತೇರುಬೀದಿ ಬಡಾವಣೆಯಲ್ಲಿ ಇಂದು ಬೆಳಿಗ್ಗೆ 3.40ಕ್ಕೆ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ತಗುಲಿ ನಾಲ್ಕು ಅಂಗಡಿಗಳು ಹೊತ್ತು ಉರಿದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಜರುಗಿದೆ.
ಅದೃಷ್ಟವಶಾತ್ ಯಾವುದೇ ಸಾವು,ನೋವು ಸಂಭವಿಸಿಲ್ಲ. ಇನ್ನೂ ತೇರುಬೀದಿ ರಸ್ತೆಯಲ್ಲಿ ಒಂದಕ್ಕೊಂದು ಅಂಟಿಕೊಂಡಿರುವಂತೆ ಇರುವ ಈ ಅಂಗಡಿಗಳು. ಮೆಕಾನಿಕ್ ಅಂಗಡಿ ಮಾಲಿಕ ಮೆಕಾನಿಕ್ ದಾದ, ಸೋಡಾ ಅಂಗಡಿ ಮಾಲಿಕ ಸೀನಪ್ಪ , ಜನರಲ್ ಸ್ಟೋರ್ ಅಂಗಡಿಯ ಮಾಲಿಕ ವೀರೇಶ್, ಲೈಟಿಂಗ್ ಅಂಗಡಿಯ ಮಾಲೀಕ ದುರ್ಗಾ ಇವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ.
ಸದ್ಯ ಘಟನೆಗೆ ಶಾರ್ಟ್ ಸರ್ಕ್ಯೂಟ್ ಮುಖ್ಯ ಕಾರಣವೆಂದು ತಿಳಿದು ಬಂದಿದ್ದು ಅಂಗಡಿಗಳಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಅಗ್ನಿ ಅವಘಡ ಸಂಭವಿಸಿದ ಕೂಡಲೇ ಸ್ಥಳಿಯರು ಅಗ್ನಿಶಾಮಕ ಠಾಣೆಗೆ ಕರೆಮಾಡಿ ವಿಷಯ ತಿಳಿಸಿದ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಗ್ನಿ ನಂದಿಸುವ ಕಾರ್ಯಕ್ಕೆ ಮುಂದಾದರೂ ಪ್ರಯೋಜನವಾಗಿಲ್ಲ.
ಪ್ರಾರಂಭದಲ್ಲಿ ಎರಡು ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ,ಅಗ್ನಿ ಶಾಮಕ ಸಿಬ್ಬಂದಿ ತಂದ ವಾಹನದಲ್ಲಿ ನೀರು ಖಾಲಿಯಾದ ಪರಿಣಾಮ ಇನ್ನೊಂದು ವಾಹನ ತರುವಂತೆ ಜನ ಕೇಳಿಕೊಂಡರೂ ಸಿಬ್ಬಂದಿಗಳು ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಇನ್ನೆರಡು ಅಂಗಡಿಗಳಿಗೂ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಜನರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನೆಡೆದಿದೆ ಎಂದು ತಿಳಿಸಿದ್ದಾರೆ.
ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಇನ್ನೊಂದು ನೀರಿನ ಟ್ಯಾಂಕರ್ ಕರೆಸಿದ್ದರೆ ಹೆಚ್ಚಿನ ಅಪಾಯ ತಪ್ಪಿಸಬಹುದಿತ್ತು ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದರೆ.
ಜನರಲ್ ಸ್ಟೋರ್ ಅಂಗಡಿಯ ಮಾಲೀಕ ವೀರೇಶ್ ಅದೇ ಅಂಗಡಿಯ ಹಿಂದುಗಡೆಯೇ ಮನೆಯಿದ್ದು ಗಂಡ, ಹೆಂಡತಿ ಮಕ್ಕಳು ಮಲಗಿದ್ದರೆ ಎಂದು ತಿಳಿದಿದ್ದು. ಅಗ್ನಿ ಅವಘಡ ಕಂಡ ಸ್ಥಳೀಯರು ಬಾಗಿಲು ಬಡಿದು ಅವರನ್ನು ಹೊರಗೆ ಕರೆತಂದಿದ್ದರಿಂದ ಮೂರು ಜೀವಗಳು ಉಳಿಯಲು ಕಾರಣವಾಗಿದೆ ಎನ್ನಲಾಗಿದೆ.