ಕುರುಗೋಡಿನಲ್ಲಿ ಈದ್‍ಮಿಲಾದ್ ಶಾಂತಿಸಭೆ

ಕುರುಗೋಡು ಅ 28 : .ಮಸೀದಿ, ದರ್ಗಾಗಳಲ್ಲಿ ಮುಸ್ಲಿಂ ಸಮಾಜದವರು, ಸಾಮಾಜಿಕ ಅಂತರ ಹಾಗು ಕೋವಿಡ್-19 ನಿಯಮಗಳೊಂದಿಗೆ ಸಾಕಷ್ಟು ಮುನ್ನೆಚ್ಚರಿಕೆ ಜೊತೆಗೆ ದೈಹಿಕ ಅಂತರ ಕಾಪಾಡಿಕೊಳ್ಳುವುದರ ಮೂಲಕ ಈದ್‍ಮಿಲಾದ್ ಹಬ್ಬವನ್ನು ಎಲ್ಲರೂ ಭಕ್ತಿಪೂರ್ವಕವಾಗಿ ಆಚರಿಸಬೇಕೆಂದು ಕುರುಗೋಡು ಸಿಪಿಐ ಚಂದನ್‍ಗೋಪಾಲ್ ಮನವಿ ಮಾಡಿದರು.
ಅವರು ಮಂಗಳವಾರ ಸಂಜೆ ಪಟ್ಟಣದ ಪೋಲೀಸ್‍ಠಾಣೆ ಆವರಣದಲ್ಲಿ ಈದ್‍ಮಿಲಾದ್ ಹಬ್ಬದ ಅಂಗವಾಗಿ ಕರೆಯಲಾಗಿದ್ದ ಶಾಂತಿಸಭೆಯಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈದ್‍ಮಿಲಾದ್ ಹಬ್ಬದಲ್ಲಿ ಸಾಮಾನ್ಯವಾಗಿ ಮುಸ್ಲಿಂ ಬಾಂದವರು ಮೆರವಣಿಗೆ ಮಾಡುವುದು ಸಹಜ. ಆದರೆ ಪ್ರಸ್ತುತ ಕೋರೋನಾ ಸೊಂಕಿತರು ಹೆಚ್ಚಿರುವುದರಿಂದ ಗುಂಪು-ಗುಂಪಾಗಿ ಸೇರಿ ಮಾಡುವ ಸಮೂಹಿಕ ಮೆರವಣಿಗೆ ನಿಷೇದಿಸಲಾಗಿದೆ. ಮಸೀದಿ, ದರ್ಗಾದಲ್ಲಿ ಸಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಮಾಡಬೇಕು. ಒಂದುವೇಳೆ ನಿಯಮಗಳನ್ನು ಮೀರಿದರೆ ಅವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಕುರುಗೋಡು ಪಿಎಸ್‍ಐ. ಎಂ. ಕೃಷ್ಣಮೂರ್ತಿ ಪ್ರಾರಂಭದಲ್ಲಿ ಸಭೆಗೆ ಬಂದಂತಹ ಎಲ್ಲರನ್ನು ಸ್ವಾಗತಿಸಿ ಮಾತನಾಡಿ, ಈದ್‍ಮಿಲಾದ್ ಹಬ್ಬದ ಸಂಭ್ರಮದಲ್ಲಿ ಸರ್ಕಾರದ ನಿಯಮಗಳನ್ನು ಯಾರು ಉಲ್ಲಂಘನೆ ಮಾಡಬಾರದು. ಒಂದುವೇಳೆ ಉಲ್ಲಂಘಿಸಿದರೆ ಅವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ನುಡಿದರು. 60ವರ್ಷ ಮೆಲ್ಪಟ್ಟ ನಾಗರಿಕರು, 10ವರ್ಷದೊಳಗಿನ ಮಕ್ಕಳು ಮನೆಯಲ್ಲಿ ಹಬ್ಬದ ಆಚರಣೆಯನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಕೆಲ ಮುಸ್ಲಿಂ ಸಮಾಜದ ಮುಖಂಡರು ಸಲಹೆ-ಸೂಚನೆ ನೀಡಿದರು. ಸಭೆಯಲ್ಲಿ ಕುರುಗೋಡು ಪೋಲೀಸ್‍ಠಾಣಾ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮುಸ್ಲಿಂ ಸಮಾಜದ ಮುಖಂಡರು ಮತ್ತು ಸಿಬ್ಬಂದಿವರ್ಗದವರು ಇದ್ದರು.