ಕುರುಗಲ್- ವೇಮಗಲ್ ಪಟ್ಟಣ ಪಂಚಾಯ್ತಿಗೆ ಕೋರ್ಟ್ ತಡೆ

ಕೋಲಾರ,ಏ.೨೧:ವೇಮಗಲ್-ಕುರುಗಲ್ ಪಟ್ಟಣ ಪಂಚಾಯ್ತಿಯಿಂದಾಗಿ ಅಕ್ಕಪಕ್ಕದ ಗ್ರಾಮಗಳಿಗೆ ಯಾವುದೇ ಪ್ರಯೋಜನವಾಗುವುದಿಲ್ಲವಾದ್ದರಿಂದಾಗಿ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ ಎಂದು ಹೋರಾಟದ ರೂವಾರಿ ಕುರುಗಲ್ ಬಿ.ಮಲ್ಲೇಶ್ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಪಟ್ಟಣ ಪಂಚಾಯ್ತಿ ರಚನೆ ಸಂಬಂಧ ಸರ್ಕಾರ ಆಕ್ಷೇಪಣೆ ಕೇಳಿದಾಗ ಮಾಹಿತಿ ಸಹಿತ ತಕರಾರು ಅರ್ಜಿ ಸಲ್ಲಿಸಿದರೂ ಕಿವಿಗೊಡದ ಅಧಿಕಾರಿಗಳು ಏಕಪಕ್ಷೀಯವಾಗಿ ಅವೈಜ್ಞಾನಿಕ ನಿರ್ಧಾರ ಕೈಗೊಂಡಿದ್ದರಿಂದಾಗಿ ಅನಿವಾರ್ಯವಾಗಿ ನ್ಯಾಯಾಂಗ ಹೋರಾಟ ಮುಂದುವರೆಸಬೇಕಾಗಿದೆ ಎಂದು ಹೇಳಿದ್ದಾರೆ.
ಕುರುಗಲ್ ಗ್ರಾಮಪಂಚಾಯ್ತಿ ವ್ಯಾಪ್ತಿಯ ೯ ಗ್ರಾಮಗಳು ಸಂಪೂರ್ಣವಾಗಿ ಕೃಷಿ ಹಾಗೂ ಕೂಲಿಯಾಧಾರಿತ ಪ್ರದೇಶವಾಗಿದ್ದು ಪಟ್ಟಣ ಪಂಚಾಯತಿ ಆದರೆ ರೈತರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ನರೇಗಾ ಯೋಜನೆ ಸ್ಥಗಿತ ಆಗುವುದರಿಂದಾಗಿ ಗ್ರಾಮೀಣ ಜನತೆಗೆ ತುಂಬಲಾರದ ತೊಂದರೆ ಆಗುತ್ತದೆ. ಇದಕ್ಕಿಂತ ಮಿಗಿಲಾಗಿ ಪ್ರಸ್ತುತ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಗ್ರಾಮೀಣ ಕೃಪಾಂಕ ಪಡೆಯುವ ಮೂಲಕ ಉನ್ನತ ಸಾಧನೆ ಮಾಡುತ್ತಿದ್ದು ಒಂದು ವೇಳೆ ಪಟ್ಟಣ ಪಂಚಾಯತಿ ಆದರೆ ಕೃಪಾಂಕ ಸವಲತ್ತಿಗೆ ಕೊಕ್ ಉಂಟಾಗುತ್ತದೆ. ಪಟ್ಟಣ ಪಂಚಾಯತಿಗೆ ವೇಮಗಲ್ ಕೇಂದ್ರ ಬಿಂದು ಆಗುವುದರಿಂದಾಗಿ ಹಲವಾರು ಹಳ್ಳಿ ಜನರು ಕಚೇರಿ ತಲುಪಲು ಕನಿಷ್ಟ ೧೦ ಕಿಮೀ ದೂರ ಕ್ರಮಿಸಬೇಕಾಗಿದೆ. ಇದೀಗ ಗ್ರಾಮಪಂಚಾಯತಿ ಕಚೇರಿ ಎಲ್ಲ ಗ್ರಾಮಗಳಿಗೆ ಒಂದೆರಡು ಕಿಮೀ ದೂರದಲ್ಲಿದ್ದು ಸರ್ಕಾರಿ ಸೌಲಭ್ಯಗಳನ್ನು ಮನೆ ಮುಂದೆಯೇ ಪಡೆಯಬಹುದಾಗಿದೆ. ಕೈಗಾರಿಕಾ ಪ್ರದೇಶಕ್ಕೆ ವೇಮಗಲ್‌ನ ಒಂದು ಸರ್ವೇ ನಂಬರ್ ಸಹಾ ಹೋಗಿಲ್ಲ. ಆದರೆ ಪಟ್ಟಣ ಪಂಚಾಯತಿ ಆದರೆ ಇಂಡಸ್ಟ್ರಿಯಲ್ ಎಸ್ಟೇಟ್‌ನ ಬಹುತೇಕ ಆದಾಯ ವೇಮಗಲ್‌ಗೆ ಹೋಗುತ್ತದೆ. ಗ್ರಾಮ ಪಂಚಾಯತಿಯಾಗಿ ಉಳಿದರೆ ಕನಿಷ್ಟ ಕೈಗಾರಿಕಾ ಪ್ರದೇಶದ ಆದಾಯವಾದರೂ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಿಗೆ ವಿನಿಯೋಗ ಆಗುವ ಮೂಲಕ ಗ್ರಾಮಾಂತರ ಪ್ರದೇಶದ ಅಭಿವೃದ್ದಿ ಆಗುತ್ತದೆ ಎಂದು ಮಲ್ಲೇಶ್ ವಾಸ್ತವ ಬಿಚ್ಚಿಟ್ಟಿದ್ದಾರೆ.
ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅವರು ವೇಮಗಲ್ ಅಭಿವೃದ್ಧಿಯೊಂದನ್ನೇ ಗುರಿಯಾಗಿಸಿಕೊಂಡು ನಿರ್ಧಾರಗಳನ್ನು ಕೈಗೊಳ್ಳಬಾರದು. ಪಟ್ಟಣ ಪಂಚಾಯತಿ ಆದರೆ ಸೇರ್ಪಡೆ ಆಗುವ ಗ್ರಾಮ ಪಂಚಾಯತಿಗಳ ಮೇಲೆ ಆಗುವ ನಕಾರಾತ್ಮಕ ಪರಿಣಾಮನದ ಕುರಿತು ಅವಲೋಕನ ಮಾಡಬೇಕು. ವೇಮಗಲ್ ಪಟ್ಟಣ ಪಂಚಾಯತಿ ಆಗಲು ನಮ್ಮದೇನೂ ತಕರಾರಿಲ್ಲ. ಆದರೆ ನಮ್ಮ ಪಂಚಾಯತಿಗಳನ್ನು ಸೇರ್ಪಡೆ ಮಾಡಿಕೊಳ್ಳಲು ನಮ್ಮ ವಿರೋಧವಿದೆ. ನ್ಯಾಯಾಂಗ ಹೋರಾಟಕ್ಕೆ ಮಾರ್ಜೇನಹಳ್ಳಿ ವೇಣುಗೋಪಾಲ್,ಮಲಿಯಪ್ಪನಹಳ್ಳಿ ನಾರಾಯಣಸ್ವಾಮಿ,ಮಡಿವಾಳ ಸುರೇಂದ್ರಗೌಡ,ವಿಶ್ವನಗರ ಸತೀಶ್,ಮಂಚಂಡಹಳ್ಳಿ ರಮೇಶ್,ಸುಳದೇನಹಳ್ಳಿ ಮುನಿರಾಜು, ಚಂದ್ರಶೇಖರ್, ಸಿ.ಎಂ.ಮುನಿರಾಜು ಸಹಕಾರ ನೀಡುತ್ತಿದ್ದು ಜೂನ್.೮ರಂದು ಈ ಸಂಬಂಧ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರು ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದ್ದಾರೆಂದು ಕುರುಗಲ್ ಮಲ್ಲೇಶ್ ಮಾಹಿತಿ ನೀಡಿದ್ದಾರೆ.