ಕುರಿದೊಡ್ಡಿಯಾದ ಘತ್ತರಗಾ ವಿದ್ಯಾಮಂದಿರ

ಅಫಜಲಪುರ:ಜು.20:ರಾಜ್ಯದಲ್ಲಿ ಅದೆಷ್ಟೊ? ಸರಕಾರಿ ಶಾಲೆಗಳ ಕಟ್ಟಡ ಗುಣಮಟ್ಟದಿಂದ ಇದ್ದರೂ ಸಹ ಸರಕಾರಿ ಶಾಲೆಗಳಲ್ಲಿ ಮಕ್ಕಳೇ ಇಲ್ಲದೆ ಮುಚ್ಚುವ ಪರಿಸ್ಥಿತಿಯಲ್ಲಿ ಇರುವಾಗ ಇಲ್ಲೊಂದು ಶಾಲೆಯಲ್ಲಿ ನೂರಾರು ಮಕ್ಕಳು ಹಾಗೂ ಶಿಕ್ಷಕರು ಇದ್ದರೂ ಸಹ ಶಾಲೆಯೂ ಮುಚ್ಚುವ ಸ್ಥಿತಿಯಲ್ಲಿ ಇದೆ.ಹೌದು ಅಫಜಲಪುರ ತಾಲೂಕಿನಲ್ಲಿ ಸುಪ್ರಸಿದ್ಧ ದೇವಸ್ಥಾನ ಹೊಂದಿರುವ ಘತ್ತರಗಾ ಭಾಗ್ಯವಂತಿ ನೆಲೆಸಿರುವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಕಟ್ಟಡದ ಪರಿಸ್ಥಿತಿ ಇಂದು ಅಥವಾ ನಾಳೆ ಕುಸಿದು ಬೀಳುವ ಸ್ಥಿತಿಯಲ್ಲಿದೆ.ಹತ್ತಾರು ವರ್ಷಗಳ ಹಳೆಯ ಕಟ್ಟಡ ಇರುವುದರಿಂದ ಸಂಪೂರ್ಣವಾಗಿ ಬಿದ್ದಿದೆ.ಹೀಗಾಗಿ ಶಾಲೆಯ ಮಕ್ಕಳು ಹೊರಗಡೆ ಕುಳಿತುಕೊಂಡು ಪಾಠ ಕೇಳುವ ದುಸ್ಥಿತಿ ಇದೆ.ಮಳೆ ಬಂದರೆ ಸಾಕು ಶಾಲೆಯ ತುಂಬಾ ನೀರಿನಿಂದ ತುಂಬಿ ತುಳುಕುತ್ತಿದೆ.ಮಳೆ ನೀರು ಬರಬಾರದೆಂದು ಮೇಲ್ಚಾವಣಿಗೆ ಶಿಕ್ಷಕರು ತಾಡಪತ್ರಿ ಕೊಟ್ಟಿರುವ ದೃಶ್ಯ ಕಂಡುಬಂದಿದೆ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದರಿಂದ ಎಂಟನೇ ತರಗತಿವರೆಗೆ 342 ವಿದ್ಯಾರ್ಥಿಗಳು ಹಾಗೂ 8 ಜನ ಶಿಕ್ಷಕರು ಅದೇ ರೀತಿ ಪ್ರೌಢಶಾಲೆ ಒಂಬತ್ತನೇ ಹಾಗೂ ಹತ್ತನೇ ತರಗತಿಯಲ್ಲಿ 220 ಜನ ವಿದ್ಯಾರ್ಥಿಗಳು 10 ಜನ ಶಿಕ್ಷಕರು ಇದ್ದಾರೆ.ಶಾಲೆ ಇರುವ ಸ್ಥಳ ಮುಜರಾಯಿ ಇಲಾಖೆಗೆ ಸೇರಿದ್ದರಿಂದ ಅಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಯಾವುದೇ ರೀತಿಯ ಅಭಿವೃದ್ಧಿ ಮಾಡಲು ಹೊರಟಿದರೆ ಅದನ್ನು ಮುಜರಾಯಿ ಇಲಾಖೆಯ ಅಧಿಕಾರಿಗಳು ತಡೆಯುತ್ತಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಭಾಗ್ಯವಂತಿ ದೇವಸ್ಥಾನಕ್ಕೆ ಬರುವ ಭಕ್ತರು ಈ ದೇವಸ್ಥಾನದ ಆವರಣ ಮುಂದೆ ಸಣ್ಣದಾಗಿ ಬಂದು ಟೆಂಟ್ ಹೊಡೆದು ಅಲ್ಲೇ ನಾಲ್ಕು ಕಲ್ಲುಗಳನ್ನು ಇಟ್ಟು ಅಡುಗೆ ಮಾಡುತ್ತಾರೆ.ನಂತರ ಡೊಳ್ಳು ಬಡಿದುಕೊಂಡು ದೇವಸ್ಥಾನಕ್ಕೆ ತೆರಳುತ್ತಾರೆ ಹೀಗಾಗಿ ಅಲ್ಲಿ ಓದುವ ಮಕ್ಕಳಿಗೆ ಡೊಳ್ಳಿನ ಶಬ್ದ ಹಾಗೂ ವಾಹನಗಳ ಕಿರಿಕಿರಿಯಿಂದ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ.ಈ ಶಾಲೆಯಲ್ಲಿ ರಾತ್ರಿಯಾದರೆ ಸಾಕು ಗ್ರಾಮದ ಕೇಲ ಕಿಡಿಗೇಡಿಗಳು ಸರಾಯಿ ಕುಡಿದು ಸ್ಥಳದಲ್ಲಿ ಬಾಟಲ್ ಒಡೆದು ಹೋಗುವುದರಿಂದ ಬಿದ್ದಿರುವ ಗಾಜುಗಳಿಂದ ಮಕ್ಕಳ ಕೈ ಕಾಲುಗಳಿಗೆ ಚುಚ್ಚಿ ರಕ್ತ ಹರಿಸುವೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸಹ ಜಿಲ್ಲಾಡಳಿತ ಹಾಗೂ ತಾಲೂಕಾ ಈ ಶಾಲೆಗೆ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿಲ್ಲ ಅದೇ ರೀತಿ ಶೌಚಾಲಯ ಸಹ ಇಲ್ಲದಂತಾಗಿದೆ ಹೀಗಾಗಿ ಇಷ್ಟೆಲ್ಲಾ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಕಲ್ಪಿಸಲು ಬೇರೆ ಕಡೆ ಸ್ಥಳಾಂತರಿಸಿ ಅಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಶಾಲೆ ಕಟ್ಟಡ ಸಂಪೂರ್ಣವಾಗಿ ಹಾಳಾಗಿದ್ದು ಇಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡಲು ಯೋಗ್ಯವಿಲ್ಲದ ಸ್ಥಳವಾಗಿದೆ.ಶಾಲೆ ಇರುವ ಸ್ಥಳವು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಅವರು ಈ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲು ಅವಕಾಶ ನೀಡುತ್ತಿಲ್ಲ ಹಾಗೂ ಈ ಸ್ಥಳದಲ್ಲಿ ಏನಾದರೂ ಅಭಿವೃದ್ಧಿ ಕೆಲಸ ಸಹ ಮಾಡಲು ನಮ್ಮ ಇಲಾಖೆಯಲ್ಲಿ ಅನುಮತಿ ಇಲ್ಲ ಹೀಗಾಗಿ ಈ ಎಲ್ಲ ಸಮಸ್ಯೆಗಳನ್ನು ಮೇಲಾಧಿಕಾರಿಗಳು ಗಮನಕ್ಕೆ ತಂದು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

-ಮಾರುತಿ ಹುಜರತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಫಜಲಪುರ

ಶಾಲೆ ನಿರ್ಮಾಣಕ್ಕೆ ಜಾಗ ತೆಗೆದುಕೊಳ್ಳಲು ಗ್ರಾಪಂ ವತಿಯಿಂದ 5 ಲಕ್ಷ ರೂ. ನೀಡಲಾಗುವುದು. ಆದರೆ ಈ ಸಮಸ್ಯೆಯನ್ನು ನಾಲ್ಕೈದು ತಿಂಗಳಲ್ಲಿ ಬಗೆಹರಿಸದಿದ್ದರೆ ಘತ್ತರಗಾ ಶಾಲೆಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮಕ್ಕಳು, ಪಾಲಕರು, ಸ್ಥಳೀಯ ಜನಪ್ರತಿನಿಧಿಗಳು ಸೇರಿ ಪಾದಯಾತ್ರೆ ಮಾಡಬೇಕಾಗುತ್ತದೆ.
-ವಿಠ್ಠಲ್ ನಾಟೀಕಾರ ಅಧ್ಯಕ್ಷರು ಗ್ರಾಪಂ ಘತ್ತರಗಾ