
ದನಗಳ ಸಂತೆಗಿಲ್ಲ ಧಣಿಗಳ ಕಾಳಜಿ! | ಜಾನುವಾರಗಳ ಮೂಕವೇದನೆ | ಜೀವಜಲಕ್ಕಾಗಿ ಪರದಾಟ
ದೇವದುರ್ಗ:ದನಕರುಗಳಿಗೆ ಬಾಧಿಸಿದ ಚರ್ಮಗಂಟು ರೋಗ ತಡೆಗೆ ಜಾನುವಾರು ಸಂತೆ ನಿಷೇಧ ಮಾಡಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ಅಧಿಕಾರಿಗಳ ಬೇಜವಾಬ್ದಾರಿ ಕಾರಣವಾಗಿದೆ. ನಿಷೇಧ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣದಂತಾಗಿದೆ. ಕುರಿಗೊಂದು ನ್ಯಾಯ ಬಸವನಿಗೊಂದು ನ್ಯಾಯ ಎನ್ನುವಂತಾಗಿದೆ. ಜೀವಜಲಕ್ಕಾಗಿ ಜನಜಾನುವಾರು ತೇಕುತ್ತಿವೆ.
ಹೌದು.. ಹಲವು ವರ್ಷಗಳ ಹಿಂದೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಜಾನುವಾರುಗಳ ಸಂತೆ ನಡೆಯುತ್ತಿದೆ. ಜಿಲ್ಲೆಯಲ್ಲೆ ದೊಡ್ಡ ಜಾನುವಾರ ಸಂತೆಯಿದು. ಯಾದಗಿರಿ, ಸುರಪುರ, ಕೆಂಭಾವಿ, ಆಂಧ್ರದಿಂದಲೂ ಜಾನುವಾರು ಸಂತೆಗೆ ಬರುತ್ತವೆ. ೨ತಿಂಗಳ ಹಿಂದೆಸಂತೆ ನಿಷೇಧ ಮಾಡಿ ಡಿಸಿ ಆದೇಶಿಸಿದ್ದಾರೆ. ಕೆಲದಿನಗಳು ಬಂದ್‌ಆಗಿದ್ದ ಸಂತೆ ನಂತರ ರೈತರು ಸಿರವಾರ ಕ್ರಾಸ್, ನೀಲವಂಜಿ ಕ್ರಾಸ್‌ನಲ್ಲಿ ಸಂತೆ ಆರಂಭಿಸಿದ್ದಾರೆ.
ಸದ್ಯ ತಾಲೂಕಿನ ಚರ್ಮಗಂಟು ರೋಗ ಸಂಪೂರ್ಣ ಅತೋಟಿಗೆ ಬಂದಿದ್ದು, ಶೇ.೧೦೦ಲಸಿಕೆ ಹಾಕಲಾಗಿದೆ. ಎಪಿಎಂಸಿ ಆವರಣದಲ್ಲಿ ಕುರಿಮೇಕೆ ಸಂತೆ ನಡೆಯುತ್ತಿದೆ. ಆದರೆ, ಜಾನುವಾರ ಸಂತೆಗೆ ಅವಕಾಶ ಕಲ್ಪಿಸಿಲ್ಲ. ಪಟ್ಟಣದಿಂದ ೫-೬ ಕಿಮೀ ದೂರದ ಸಿರವಾರಕ್ರಾಸ್‌ನಲ್ಲಿ ಸಂತೆ ಮಾಡಲಾಗುತ್ತಿದೆ. ಸಾವಿರಾರು ಜಾನುವಾರ ಸಂತೆಗೆ ಬರುತ್ತಿದ್ದು, ಗಿಜಗನಗುಡಿನಂತೆ ಜನರು ಸೇರುತ್ತಾರೆ. ಆದರೆ, ಜನ ಜಾನುವಾರಿಗೆ ಕುಡಿವ ನೀರು, ನೆರಳು, ಆಸನ ವ್ಯವಸ್ಥೆಯಿಲ್ಲ. ಅಕ್ಕಪಕ್ಕದ ರೈತರ ಜಮೀನಿನಲ್ಲಿ ಕುಳಿತು, ಮನೆಯಿಂದ ತಂದ ನೀರು, ಊಟ ಮಾಡಿ ರೈತರು ವ್ಯಾಪಾರ ಮಾಡುವ ಸ್ಥಿತಿಯಿದೆ.
ತಿಂಥಣಿ ಕಲ್ಮಲಾ ರಸ್ತೆ ಅಕ್ಕಪಕ್ಕ, ಬಲದಂಡೆ ಉಪಕಾಲುವೆ ಮೇಲ್ಭಾಗ, ರೈತರ ಜಮೀನಿನ ಬದುವು, ಖಾಲಿಜಾಗದಲ್ಲಿ ವ್ಯಾಪಾರ ನಡೆಯುತ್ತಿದೆ. ಎಪಿಎಂಸಿ, ಪಶು ಇಲಾಖೆ, ತಾಲೂಕು ಆಡಳಿತ, ಪುರಸಭೆ ಜನಜಾನುವಾರಿಗೆ ಕನಿಷ್ಠ ಕುಡಿವ ನೀರಿನ ಸೌಲಭ್ಯವೂ ಕಲ್ಪಿಸಿಲ್ಲ. ರಣರಣ ಬಿಸಿಲಿನಲ್ಲಿ ನಿಂತು ವ್ಯಾಪಾರ ಮಾಡಬೇಕಿದ್ದು, ಊಟಮಾಡಲು ಸರಿಯಾದ ಹೋಟೆಲ್, ಖಾನಾವಳಿಯಿಲ್ಲ. ಅಲ್ಲದೆ ಕಳ್ಳಕಾಕರ ಹಾವಳಿ ಹೆಚ್ಚಿದ್ದು ಎತ್ತುಗಳು ಮಾರಿದ ಹಣಕ್ಕೆ ಭದ್ರತೆಯಿಲ್ಲ. ಜಿಲ್ಲೆಯ ಬಹುದೊಡ್ಡ ಜಾನುವಾರ ಸಂತೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಡೆಯುವ ಆತಂಕದಲ್ಲಿದೆ. ಇಲ್ಲಿ ಬಿಟ್ಟರೆ ಕೆಂಭಾವಿ, ರಂಗಂಪೇಟೆ, ಸಿಂಧನೂರು, ರಾಯಚೂರಿಗೆ ತೆರಳಬೇಕು. ಇರುವ ಸಂತೆ ಉಳಿಸಬೇಕು. ಎಪಿಎಂಸಿಯಲ್ಲಿ ಜಾನುವಾರ ಸಂತೆ ಮಾಡಲು ಅವಕಾಶ ನೀಡಬೇಕು ಎಂದು ರೈತರು ಮರಗುತ್ತಿದ್ದಾರೆ.
ನಿರ್ಲಕ್ಷ್ಯಕ್ಕೆ ಯಾರು ಹೊಣೆ?
ಜಿಲ್ಲಾಧಿಕಾರಿ ಹೊರಡಿಸಿದ ನಿಷೇಧ ಆದೇಶವಿಡಿದು ಅಧಿಕಾರಿಗಳು ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ. ಸಂತೆ ಮಾಡಲು ಅವಕಾಶ ಇಲ್ಲ, ನಾವೇನು ಮಾಡೋಣ ಎಂದು ನುಸುಳಿಕೊಳ್ಳುತ್ತಿದ್ದಾರೆ. ಎಪಿಎಂಸಿ, ಪಶು ಇಲಾಖೆ, ತಾಲೂಕು ಆಡಳಿತ, ಪುರಸಭೆ ಸಂತೆಗೂ ನಮಗೂ ಸಂಬಂಧವೇ ಇಲ್ಲ ಎನ್ನುವಂತಿವೆ. ಆಡು ಕುರಿಗೆ ಬಾರದ ಚರ್ಮಗಂಟು ರೋಗ ಆಕಳು, ಎತ್ತು, ಎಮ್ಮೆಗೆ ಮಾತ್ರ ಬರುತ್ತಾ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಸಿರವಾರ ಕ್ರಾಸ್‌ನಲ್ಲಿರುವ ಹೋಟೆಲ್, ಬಾರ್, ಢಾಭಾ ಮಾಲೀಕರು ಅಧಿಕಾರಿಗಳಿಗೆ ಮಾಮೂಲಿ ನೀಡುತ್ತಿದ್ದು, ಹೀಗಾಗಿ ಅಲ್ಲಿಯೇ ಸಂತೆ ಶಾಸ್ವತವಾಗಿ ನಡೆಸುವ ಹುನ್ನಾರ ನಡೆದಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಜನ ಜಾನುವಾರುಗಳ ಮೂಕವೇದನೆ ಕೇಳಬೇಕಿದೆ.
ಕೋಟ್=====
ಜಾನುವಾರಗಳ ಸಂತೆ ನಿಷೇಧ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರಿಂದ ಎಪಿಎಂಸಿ ಆವರಣದಲ್ಲಿ ಸಂತೆ ನಡೆಸಲು ಅವಕಾಶ ನೀಡಿಲ್ಲ. ಕುರಿ, ಆಡುಗಳ ಸಂತೆ ನಡೆಯುವ ಬಗ್ಗೆ ಮಾಹಿತಿಯಿಲ್ಲ. ಸಂತೆ ನಡೆಸಲು ಡಿಸಿ ಆದೇಶ ಮಾಡಿದ ನಂತರ ಅವಕಾಶ ಕಲ್ಪಿಸುತ್ತೇವೆ.
| ಪ್ರಕಾಶಪಾಟೀಲ್ ಜೇರಬಂಡಿ
ಎಪಿಎಂಸಿ ಅಧ್ಯಕ್ಷ
ಕೋಟ್======
ಜಾನುವಾರ ಸಂತೆ ನಡೆಸುವ ಬಗ್ಗೆ ನಾವು ಹೇಳಲು ಬರಲ್ಲ. ದನಗಳ ಆರೋಗ್ಯ ಕಾಪಾಡುವುದು, ಚಿಕಿತ್ಸೆ ನೀಡುವುದು ನಮ್ಮ ಕೆಲಸ. ಚರ್ಮಗಂಟು ರೋಗ ನಮ್ಮಲ್ಲಿ ಶೇ.೯೦ ಕಂಟ್ರೋಲ್‌ನಲ್ಲಿದೆ. ಎಲ್ಲ ಜಾನುವಾರುಗಳಿಗೆ ಲಸಿಕೆ ನೀಡಿದ್ದೇವೆ. ಸಂತೆ ನಡೆಸಬಹುದು ಎಂದು ಮೇಲಧಿಕಾರಿಗಳಿಗೆ ವರದಿ ನೀಡಿದ್ದೇವೆ. ಈ ಬಗ್ಗೆ ಡಿಸಿ ಹಾಗೂ ಸ್ಥಳೀಯ ಆಡಳಿತ ತೀರ್ಮಾನ ಕೈಗೊಳ್ಳಬೇಕು.
| ಡಾ.ಬಸವರಾಜ ಮಿರಸದಾರ್
ತಾಲೂಕು ಪಶು ಆರೋಗ್ಯ ಅಧಿಕಾರಿ
ಕೋಟ್========
ರೈತ್ರು, ದನಗಳ ಚಿಂತೆ ಕಟ್ಟಿಕೊಂಡು ಯಾರಿಗೆ ಏನಾಗಬೇಕು. ಅಧಿಕಾರಿಗಳಿಗೆ ತಿಂಗಳತಿಂಗಳ ಪಗರ್‌ಬಂದ್ರೆ ಸಾಕು. ಸಿರವಾರ ಕ್ರಾಸ್‌ನಲ್ಲಿ ಸಂತೆ ನಡೆತ್ಯಾದ. ಕುಡ್ಯಾಕ್‌ನೀರು, ನೆರಳು, ಸರಿಗ್ಯಾ ಊಟ ಸಿಗವಲ್ತು. ಬಿಸಿಲಿಗೆ ದನ ತೇಕತಾವ್. ರೋಡ್, ಕೆನಾಲ್ ಮ್ಯಾಲೆನಿಂತ ವ್ಯಾಪಾರ ಮಾಡ್ತಾರಾ. ಕುರಿಆಡುಕೋಳಿ ಸಂತೆ ಮಾಡಕ್ ಕೊಟ್ಟಾರಾ, ದನದಸಂತಿ ಬ್ಯಾಡ ಅಂತರಾ. ಯಾಕ್ ಕುರಿಗೆಆಡಿಗೆ ರೋಗ ಬರಲ್ಲೇನು.?
| ಉಮಾಪತಿಗೌಡ
ನಗರಗುಂಡ ರೈತ