ಸಂಜೆ ವಾಣಿ ವಾರ್ತೆ
ಕೊಟ್ಟೂರು:ಜು,24- ಹಗಲು, ರಾತ್ರಿ, ಮಳೆ, ಗುಡುಗು, ಸಿಡಿಲು ನಡುವೆ ಕುರಿಸಾಕಾಣಿಕೆಯನ್ನೇ ಅವಲಂಭಿಸಿರುವ ಕುರಿಗಾರರ ರಕ್ಷಣೆಗೆ ಸರ್ಕಾರ ಕುರಿಗಾರರ ಕ್ಷೇಮಾಭಿವೃದ್ದಿ ನಿಧಿ ಆರಂಭಿಸಬೇಕೆಂದು ವಿಜಯನಗರ, ಬಳ್ಳಾರಿ ಕುರಿಗಾರರ ನಿಯೋಗದ ನೇತೃತ್ವವಹಿಸಿದ್ದ ಉಜ್ಜಿನಿ ರುದ್ರಪ್ಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹಕಚೇರಿ ಕೃಷ್ಣದಲ್ಲಿ ಶನಿವಾರ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಕುರಿಗಾರರ ನಿಯೋಗ ಸಿಎಂ ಅವರನ್ನು ಭೇಟಿಯಾಗಿ ಕುರಿಗಾರರ ಸಮಸ್ಯೆ ಕುರಿತು ವಿವರಣೆ ನೀಡಿದರು.
ಈ ಕುರಿಗಾರರ ಕ್ಷೇಮಾಭಿವೃದ್ದಿ ನಿಧಿಗೆ ರಾಜ್ಯದ ಎಲ್ಲಾ ಕುರಿಗಾರರು ವಿಮೆ ಮಾದರಿಯಲ್ಲಿ ಸದಸ್ಯರಾದರೆ, ಅಸಹಜ, ಪ್ರಕೃತಿ ವಿಕೋಪಕ್ಕೆ, ಸಿಡಿಲಿಗೆ ಬಲಿಯಾದ ಕುರಿಗಾರರ ಕುಟುಂಬಕ್ಕೆ ಇದರ ಮೂಲಕ ಪರಿಹಾರ ನೀಡಿ ಆಸರೆಯಾಗುವುದು ಇದರ ಮೂಲ ಉದ್ದೇಶವಾಗಿದೆ ಎಂದು ಉಜ್ಜಿನಿ ರುದ್ರಪ್ಪ ವಿವರಿಸಿದರು.
ಈ ಮೊದಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದಾಗ, ಕುರಿ ಸಹಕಾರ ಸಂಘಗಳಿಗೆ ಉಚಿತವಾಗಿ ಕುರಿ ಔಷಧಿಗಳು ಸರಬರಾಜು ಆಗುತ್ತಿದ್ದವು. ಅವುಗಳನ್ನು ಸಂಘದ ಮೂಲಕ ಕುರಿಗಾರರಿಗೆ ಉಚಿತವಾಗಿ ವಿತರಿಸಲಾಗುತ್ತಿತ್ತು.
ಬಿಜೆಪಿ ಸರ್ಕಾರ ಬಂದ ಮೇಲೆ ಕುರಿಗಾರರ ಈ ಸೌಲಭ್ಯವನ್ನು ರದ್ದುಗೊಳಿಸಿದ ಪರಿಣಾಮ, ಸಕಾಲಕ್ಕೆ ಕುರಿಗಾರರಿಗೆ ಔಷಧಿ ಸಿಗದೆ ತೊಂದರೆ ಪಡುತ್ತಿದ್ದು, ಪುನ: ಔಷಧಿ ವಿತರಣೆ ವ್ಯವಸ್ಥೆಯನ್ನು ಆರಂಭಿಸಬೇಕು ಎಂದರು.
ಜನೌಷಧಿ ಮಾದರಿಯಲ್ಲು ಕುರಿಗಳ ಔಷಧಿಗಳನ್ನು ವಿತರಿಸುವ ಅಂಗಡಿಗಳನ್ನು ತಾಲೂಕಿಗೆ ಒಂದರಂತೆ ಆರಂಭಿಸಿದರೆ, ಕುರಿಗಾರರಿಗೆ ಕಡಿಮೆ ಬೆಲೆಗೆ ಗುಣಮಟ್ಟದ ಔಷಧಿ ಖರೀದಿಸಲು ಅನುಕೂಲವಾಗಲಿದೆ ಎಂದು ಸಿಎಂಗೆ ಮನವರಿಕೆ ಮಾಡಿದರು.
ಕುರಿಗಾರರ ಸರ್ವತೋಮುಖ ಅಭಿವೃದ್ದಿ ಮತ್ತು ಕಷ್ಟಗಳಿಗೆ ಸ್ಪಂದಿಸುವುದಕ್ಕಾಗಿಯೇ ಅನುಷ್ಠಾನಗೊಂಡ ಕುರಿ ಸಹಕಾರಗಳಿಗೆ ಸರ್ಕಾರದಿಂದ ಮಂಜೂರಾಗುವ ಸಾಲ ಸೌಲಭ್ಯ ಪಡೆಯಲು ಫಲಾನುಭವಿಗಳ ಆಯ್ಕೆಯ ಅಧಿಕಾರವನ್ನು ಸಂಘಗಳಿಗೆ ನೀಡಬೇಕೆಂದು ವಿನಂತಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕುರಿಗಾರರ ಸಮಸ್ಯೆ ಕುರಿತಾದ ಸಮಸ್ಯೆಗಳನ್ನು ಆಲಿಸಿದ ನಂತರ ಇವುಗಳಿಗೆಲ್ಲ ಸ್ಪಂದಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ರೇವಣ್ಣ, ಕುರಿ ನಿಗಮದ ಮಾಜಿ ಅಧ್ಯಕ್ಷ ಪಂಡಿತ ರಾವ್ ಚಿದ್ರಿ, ರಾಜೇಂದ್ರ ಸಣ್ಣಕ್ಕಿ ಸೇರಿದಂತೆ ರಾಜ್ಯದ ನಾನಾ ಭಾಗದಿಂದ ಬಂದ ಹಾಲುಮತ ಸಮಾಜದ ಮುಖಂಡರಿದ್ದರು.
ಕೊಟ್ಟೂರು ಹೋಬಳಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘದ ಉಪಾಧ್ಯಕ್ಷ ತೋಟದ ರಾಮಣ್ಣ, ನಿರ್ದೇಶಕರಾದ ನೊಸಪ್ಪರ ಮೂಗಪ್ಪ, ಚಿರಬಿ ಕೊಟ್ರೇಶ, ಸುಟ್ಟಕೋಡಿಹಳ್ಳಿ ಮಲ್ಲಿಕಾರ್ಜುನ ಮತ್ತು ಉಜ್ಜಿನಿ ರೇವಣ್ಣ ಹಾಗೂ ಕೂಡ್ಲಿಗಿ ಹೋಬಳಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘದ ಅಧ್ಯಕ್ಷ ಈಚಲಬೊಮ್ಮನಹಳ್ಳಿ ಅಂಜಿನಪ್ಪ, ಸಂಡೂರು ತಾಲೂಕು ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸೇರಿದಂತೆ ಹಲವಾರು ಜನರು ಆಗಮಿಸಿದ್ದರು.