ಕುರಾನ್ ದಹನ ನಿಷೇಧ: ಮಸೂದೆ ಅಂಗೀಕಾರ

ಕೋಪನ್ ಹೇಗನ್ (ಡೆನ್ಮಾರ್ಕ್), ಡಿ.೯- ಕುರಾನ್‌ಗೆ ಅಪಮಾನ ಮಾಡುವುದರ ವಿರುದ್ಧ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ಭದ್ರತಾ ಸಮಸ್ಯೆಗಳು ಉಂಟಾಗಬಹುದು ಎಂಬ ಕಾರಣಕ್ಕೆಡೆನ್ಮಾರ್ಕ್ ಸಂಸತ್ತು ಕುರಾನ್ ಅನ್ನು ಸಾರ್ವಜನಿಕ ಸ್ಥಳಗಳಲ್ಲಿ ದಹಿಸುವುದನ್ನು ನಿಷೇಧಿಸುವ ಮಸೂದೆಯೊಂದನ್ನು ಅಂಗೀಕರಿಸಿದೆ.
ಮಾನ್ಯತೆ ಹೊಂದಿರುವ ಧಾರ್ಮಿಕ ಸಮುದಾಯವೊಂದರ ಗಮನಾರ್ಹ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿರುವ ಬರಹಗಳಿಗೆ ಸೂಕ್ತವಲ್ಲದ ರೀತಿಯಲ್ಲಿ ಉಪಚರಿಸುವುದನ್ನು ನಿಷೇಧಿಸಿ ಗುರುವಾರ ಮಂಡಿಸಲಾಗಿದ್ದ ಮಸೂದೆಯ ಪರ ೯೪ ಮತಗಳು ಚಲಾವಣೆಗೊಂಡರೆ, ಅದರ ವಿರುದ್ಧ ೭೭ ಮತಗಳು ಬಿದ್ದವು. ಡೆನ್ಮಾರ್ಕ್ ಸಂಸತ್ತು ೧೭೯ ಸದಸ್ಯ ಬಲವುಳ್ಳದ್ದಾಗಿದೆ. ಪ್ರಾಯೋಗಿಕವಾಗಿ ಪವಿತ್ರ ಗ್ರಂಥಗಳನ್ನು ಸಾರ್ವಜನಿಕವಾಗಿ ದಹಿಸುವುದು ಅಥವಾ ಹರಿದು ಹಾಕುವುದು ಅಥವಾ ಅಂತಹ ಕೃತ್ಯಗಳನ್ನು ವೀಡಿಯೊಗಳ ಮೂಲಕ ವ್ಯಾಪಕವಾಗಿ ಪ್ರಸಾರ ಮಾಡುವ ಉದ್ದೇಶ ಹೊಂದಿರುವುದನ್ನು ಈ ಮಸೂದೆಯು ನಿಷೇಧಿಸುತ್ತದೆ. ಈ ಕಾನೂನನ್ನು ಉಲ್ಲಂಘಿಸುವವರಿಗೆ ದಂಡ ಅಥವಾ ಎರಡು ವರ್ಷಗಳ ಕಾಲ ಸೆರೆವಾಸ ವಿಧಿಸಬಹುದಾಗಿದೆ. ಈ ಮಸೂದೆಯು ಶಾಸನವಾಗಿ ಜಾರಿಗೆ ಬರುವುದಕ್ಕೂ ಮುನ್ನ, ರಾಣಿ ಮಾರ್ಗರೆಥ್ ಅಧಿಕೃತವಾಗಿ ಅದಕ್ಕೆ ಸಹಿ ಮಾಡಬೇಕಿದೆ. ಈ ತಿಂಗಳೊಳಗೆ ಮಸೂದೆಗೆ ಅಂಕಿತ ಬೀಳುವ ನಿರೀಕ್ಷೆ ಇದೆ. ಡೆನ್ಮಾರ್ಕ್‌ನಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವಂತಹ ವ್ಯವಸ್ಥಿತ ಅಣಕವನ್ನು ತಡೆಯುವ ಉದ್ದೇಶವನ್ನು ಈ ಶಾಸನ ಹೊಂದಿದೆ ಎಂದು ಡೆನ್ಮಾರ್ಕ್‌ನ ಕಾನೂನು ಸಚಿವಾಲಯವು ಹೇಳಿದೆ.