ಕುರಬರನ್ನು ಎಸ್‌ಟಿಗೆ ಸೇರಿಸಲು ಹೋರಾಟ, ಸಮಾವೇಶ

ಸಿಂಧನೂರು.ಅ.28- ಕುರುಬ ಸಮಾಜವನ್ನು ಎಸ್.ಟಿ.ಗೆ ಸೇರಿಸಬೇಕೆಂದು ಒತ್ತಾಯಿಸಿ ಹೋರಾಟ ಹಾಗೂ ಸಮಾವೇಶಗಳನ್ನು‌ ಮಾಡುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುತ್ತದೆಂದು ಕೆ.ವಿರುಪಾಕ್ಷಪ್ಪ ಹೇಳಿದರು.
ತಮ್ಮ ನಿವಾಸದಲ್ಲಿ ಕರೆದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಹಿಂದೆ ‌ದೇವರಾಜ ಅರಸು ರವರು ಕುರುಬ ಸಮಾಜವನ್ನು ಎಸ್.ಟಿ ಗೆ ಸೇರಿಸುವಂತೆ ಶಿಪಾರಸ್ಸು ಮಾಡಿದ್ದರು. ಆ ಶಿಪಾರಸ್ಸುನ್ನು ಜಾರಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಸಮಾಜದ 4 ಗುರುಪೀಠಗಳ ಸ್ವಾಮಿಗಳ ನೇತೃತ್ವದಲ್ಲಿ ಹೋರಾಟ ನಡೆಯುತ್ತಿರುವದು ಶುಭ ಸೂಚನೆ ಈ ಹೋರಾಟದ ರೂವಾರಿ ಸಚಿವ ಈಶ್ವರಪ್ಪ ಆಗಿದ್ದು 4 ಜನ ಗುರುಗಳು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮನವೊಲಿಸಿ ಒಪ್ಪಿಗೆ ಪಡೆದು ಹೋರಾಟ ಪ್ರಾರಂಭಿಸಲಾಗಿದೆ ಎಂದರು.ಬೆಳಗಾವಿ ವಿಭಾಗ ,ಮೈಸೂರು ವಿಭಾಗ, ಗುಲ್ಬರ್ಗಾ ವಿಭಾಗ ಸಮಾವೇಶ ದಿನಾಂಕ 27 ರಂದು ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ವಿಭಾಗ ಸಮಾವೇಶವನ್ನು ಸಿಂಧನೂರು ನಗರದಲ್ಲಿ ಮಾಡಲಾಗುವದೆಂದರು.
ಹೋರಾಟ ,ಸಮಾವೇಶದ ‌ನಂತರ ಸಮಾಜ ಗುರುಗಳ ನೇತೃತ್ವದಲ್ಲಿ ಸಮಾಜದ ರಾಜಕೀಯ ಮುಖಂಡರು ಸೇರಿಕೊಂಡು ದೆಹಲಿಗೆ ತೆರಳಿ ಪ್ರಧಾನಿ ಮೋದಿ ಹಾಗೂ ‌ಅಮಿತ್ ಷಾ ರನ್ನು ಬೇಟಿ ಮಾಡಿ ಕುರುಬರನ್ನು ಎಸ್.ಟಿ. ಗೆ ಸೇರಿಸುವಂತೆ ಒತ್ತಾಯಿಸಲಾಗುವದು.ಮಕರ ಸಂಕ್ರಾಂತಿ ದಿನದಂದು ಸಮಾಜದ ನಾಲ್ಕು ಜನ ಗುರುಗಳ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರು ತನಕ‌ ಪಾದಯಾತ್ರೆ ಮಾಡಿ ಪೆಭ್ರುವರಿ 7 ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬೃಹತ್ ಹೋರಾಟ ಸಮಾವೇಶ ಮಾಡಲಾಗುವದು .ಸುಮಾರು 10 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು.ಜಿಲ್ಲಾ ‌ಮತ್ತು ತಾಲುಕ ‌ಕೇಂದ್ರಗಳಲ್ಲಿ ಹೋರಾಟ ಸಮಿತಿಗಳನ್ನು ರಚಿಸಲಾಗಿದೆಂದರು.
ಸಮಾಜದ ಗುರುಗಳಾದ ಮಾದಯ್ಯ ಗುರುವಿನ್ ತುರವಿಹಾಳ, ಸಮಾಜದ ತಾಲೂಕ ಅಧ್ಯಕ್ಷರಾದ ಪೂಜಪ್ಪ ಪೂಜಾರಿ, ಸಮಾಜದ ಮುಖಂಡರಾದ ಟಿ.ಹನುಮಂತಪ್ಪ, ನಿರುಪಾದೆಪ್ಪ ಗುಡಿಹಾಳ, ವೆಂಕೋಬ ಸಾಸಲಮರಿ, ಭೀಮಣ್ಣ ಸಂಗಟಿ ,ನಾಗರಾಜ ಬಾದರ್ಲಿ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.