ಕುರನಳ್ಳಿಯಲ್ಲಿ ಖಬರಸ್ಥಾನ್ ಹೆಸರಿಗೆ ಪಹಣಿ ಮಾಡಿಕೊಡಲು ಒತ್ತಾಯ

ಕಲಬುರಗಿ.ಜು.27: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕುರನಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್ 74ರಲ್ಲಿ 8 ಹಿಸ್ಸಾಗಳಿವೆ. ವಿಸ್ತರಣೆ 530 ಎಕರೆ 6 ಗುಂಟೆ ಸರ್ಕಾರಿ ಜಮೀನು ಇದ್ದು, ಸರ್ವೆ ನಂಬರ್ 74/1ರಲ್ಲಿ 99 ಎಕರೆ 5 ಗುಂಟೆ ಸರ್ಕಾರಿ ಜಮೀನಿನಲ್ಲಿ ಕೇವಲ ಎರಡು ಎಕರೆ ಜಮೀನಿನಲ್ಲಿ ಖಬರಸ್ತಾನ್ ಇದೆ. ಸದರಿ ಎರಡು ಎಕರೆ ಜಮೀನು ಕಾನೂನು ಪ್ರಕಾರ ಖಬರಸ್ತಾನ್ ಹೆಸರಿಗೆ ಪಹಣಿ ಮಾಡಿಕೊಡಬೇಕು ಎಂದು ಒತ್ತಾಯಿಸಿ ಬುಧವಾರ ಟಿಪ್ಪುಸುಲ್ತಾನ್ ಮೈನಾರಿಟಿ ಕಮ್ಯುನಿಟಿ ವೆಲ್‍ಫೇರ್ ಅಸೋಸಿಯೇಷನ್ ಕಾರ್ಯಕರ್ತರು ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಜೇವರ್ಗಿ ತಾಲ್ಲೂಕು ಟಿಪ್ಪು ಸುಲ್ತಾನ್ ಕಮೀಟಿ ಅಧ್ಯಕ್ಷ ಮೋಹಿಯುದ್ದೀನ್ ಇನಾಮದಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಹಾಗೂ ಗ್ರಾಮದ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.
ಪ್ರತಿಭಟನೆಕಾರರು ನಂತರ ಪ್ರಾದೇಶಿಕ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ, ಕಳೆದ ಹತ್ತು ವರ್ಷಗಳಿಂದ ನಬಿಲಾಲ್ ತಂದೆ ಇಮಾಮಸಾಬ್ ಕುರನಳ್ಳಿ ಅವರು ನಿರಂತರವಾಗಿ ಲಿಖಿತ ರೂಪದಲ್ಲಿ ಮತ್ತು ಮೌಖಿಕವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಎರಡು ಎಕರೆ ಜಮೀನು ಖಬರಸ್ತಾನ್ ಹೆಸರಿಗೆ ಪಹಣಿ ಮಾಡಲು ಮನವಿ ಸಲ್ಲಿಸಲಾಗಿದೆ. ಚುನಾಯಿತ ಜನಪ್ರತಿನಿಧಿಗಳಿಗೂ ಸಹ ಕೋರಲಾಗಿದೆ ಎಂದು ತಿಳಿಸಿದರು.
ಗ್ರಾಮದ ಸಾರ್ವಜನಿಕರ ಯಾವುದೇ ರೀತಿಯ ತಂಟೆ ತಕರಾರು ಇಲ್ಲ. ಪ್ರತಿಯೊಂದು ಸಮುದಾಯಕ್ಕೆ ಖಬರಸ್ತಾನ್ ಜಮೀನು ಅವರವರ ಸಮುದಾಯಕ್ಕೆ ಮಾಡಿಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ನೂರಾರು ಎಕರೆ ಸರ್ಕಾರದ ಜಮೀನು ಇದ್ದು, ಕೇವಲ ಎರಡು ಎಕರೆ ಜಮೀನು ಖಬರಸ್ತಾನ್ ಹೆಸರಿಗೆ ಮಾಡಿಕೊಡಲು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಮುಂದೆ ವಿಳಂಬ ಮಾಡಿದಲ್ಲಿ ಹೈಕೋರ್ಟ್‍ಗೆ ಮೊರೆ ಹೋಗುವುದು ಹಾಗೂ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದರು.