ಕುಮಾರ್ ವಿನಯ್ ಬಿ. ಪಾಟೀಲ್ ಮೊಕದ್ದಮೆ

ಮುಚ್ಚಿ ಹಾಕಲು ಕೃಷಿ ವಿವಿ ಪರಿಷತ್ ಯತ್ನ
ರಾಯಚೂರು,ಜು.೨೮:ಸುಳ್ಳು ಮಾಹಿತಿ ನೀಡಿ ಕೃಷಿ ಕೋಟಾದಲ್ಲಿ ರಾಯಚೂರು ವಿವಿಯಲ್ಲಿ ಸೀಟು ಪಡೆದಿದ್ದ ಕುಮಾರ್ ವಿನಯ್ ಬಿ. ಪಾಟೀಲ್ ಮೊಕದ್ದಮೆಯನ್ನು ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಟಿ. ಮಾರೆಪ್ಪ ಆರೋಪಿಸಿದ್ದಾರೆ.
೨೦೦೮=೦೯ನೇ ಸಾಲಿನಲ್ಲಿ ಕೃಷಿ ಕೋಟಾದಡಿ ಕುಮಾರ್ ವಿನಯ್ ಬಿ. ಪಾಟೀಲ್ ತಂದೆ ವಿ.ವಿ ಪಾಟೀಲ್ ಇವರು ಕಾನೂನು ಬಾಹಿರವಾಗಿ ಪ್ರವೇಶ ಪಡೆದಿದ್ದರು. ಸರ್ಕಾರದ ಅಧೀನ ಕಾರ್ಯದರ್ಶಿಗಳು ಕುಮಾರ್ ವಿನಯ್ ಬಿ. ಪಾಟೀಲ್ ಕೃಷಿ ಕೋಟಾದಡಿ ಸೀಟು ಪಡೆದು ಅಕ್ರಮವಾಗಿ ಪದವಿ ಹಾಗೂ ಎಂ.ಎಸ್.ವಿ ಕೃಷಿ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯ ಶೈಕ್ಷಣಿಕ ಪರಿಷತ್ತು ಹಾಗೂ ವ್ಯವಸ್ಥಾಪನಾ ಮಂಡಳಿ ನಿರ್ಧಾರವೇ ಅಂತಿಮ ಎಂದು ಕುಲಸಚಿವರಿಗೆ ಪತ್ರ ಬರೆದಿರುವುದು ಸಂಪೂರ್ಣ ಕಾನೂನು ಉಲ್ಲಂಘನೆ ಕೃತ್ಯವಾಗಿದೆ. ಸದರಿ ವಿಷಯ ಕುರಿತಂತೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ. ಆದರೆ, ಪ್ರಕರಣ ವಿಚಾರಣೆ ಹಂತದಲ್ಲಿದ್ದರೂ ಸಹ ವ್ಯವಸ್ಥಾಪನಾ ಮಂಡಳಿ ನಿರ್ಧಾರವೇ ಅಂತಿಮ ಎಂದಿರುವುದು ಸಂಪೂರ್ಣ ಕಾನೂನು ಉಲ್ಲಂಘನೆ ಎಂದು ಮಾರಪ್ಪ ತಿಳಿಸಿದ್ದಾರೆ.
ಕುಲ ಸಚಿವ ಡಾ. ಎಂ. ವೀರನಗೌಡ, ವಿವಿ ಶೈಕ್ಷಣಿಕ ಷರತ್ತಿನ ೦೯ರ ನಿಯಮದನ್ವಯ ಪ್ರಕರಣವನ್ನು ವಿವಿ ಮಟ್ಟದಲ್ಲೇ ಮುಚ್ಚಿ ಹಾಕಲು ಒತ್ತಡ ಹೇರಲಾಗುತ್ತಿದೆ. ಉಳಿದಂತೆ ಡಾ. ಎಂ. ವೀರಣಗೌಡ ಅವರ ಮಗಳು ಸೌಮ್ಯಾ ಕೂಡ ೨೦೧೧-೧೨ನೇ ಸಾಲಿನಲ್ಲಿ ಕೃಷಿ ಕೋಟಾದಡಿ ಅಕ್ರಮವಾಗಿ ಕೃಷಿ ತಾಂತ್ರಿಕ ಕೋರ್ಸ್‌ಗೆ ಪ್ರವೇಶ ಪಡೆದಿದ್ದಾರೆ. ಇದರಿಂದಾಗಿ ಕುಮಾರ್ ವಿನಯ್ ಬಿ. ಪಾಟೀಲ್ ಪ್ರಕರಣವನ್ನು ಮುಚ್ಚಿ ಹಾಕಿದರೆ ತಮ್ಮ ಮಗಳ ಪ್ರಕರಣವನ್ನು ಸುಲಭವಾಗಿ ಮುಚ್ಚಿ ಹಾಕಬಹುದೆನ್ನುವುದು ವೀರನಗೌಡನ ಲೆಕ್ಕಾಚಾರವೆಂದು ಮಾರೆಪ್ಪ ಹೇಳಿದ್ದಾರೆ.
ಈ ಎಲ್ಲ ವಿಷಯಗಳನ್ನು ಪರಿಗಣಿಸಿ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ನ್ಯಾಯಾಂಗಕ್ಕೆ ಗೌರವ ನೀಡುತ್ತಾರೆಂದು ಭಾವಿಸಿದ್ದೇನೆ. ಒಂದು ವೇಳೆಕುಲಪತಿಗಳು ಬಾಹ್ಯ ಒತ್ತಡಕ್ಕೆ ಮಣಿದು ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಸಿದರೆ ವಿವಿ ವಿರುದ್ಧ ಕಾನೂನು ನಿಂದನೆ ಪ್ರಕರಣವನ್ನು ದಾಖಲಿಸಲಾಗುತ್ತದೆ ಎಂದು ಮಾರೆಪ್ಪ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.