
ಸೊರಬ.ಎ.21: ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ತಮ್ಮೊಂದಿಗೆ ಮುನಿಸಿಕೊಂಡ ನಮೋ ವೇದಿಕೆ ಕಾರ್ಯಕರ್ತರು ಒಂದಾಗಿದ್ದು, ತಮ್ಮ ಗೆಲುವು ನಿಶ್ಚಿತ ಎಂದು ಹೇಳುವ ಮೂಲಕ ಹಗಲುಗನಸು ಕಾಣುತ್ತಿದ್ದಾರೆ ಎಂದು ನಮೋ ವೇದಿಕೆ ಅಧ್ಯಕ್ಷ ಪಾಣಿ ರಾಜಪ್ಪ ಲೇವಡಿ ಮಾಡಿದರು. ನಮೋ ವೇದಿಕೆ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.ಚುನಾವಣೆಗೆ ನಮೋ ವೇದಿಕೆ ಮುಖಂಡರು ಹಾಗೂ ಕಾರ್ಯಕರ್ತರು ತಮಗೆ ಸಹಕಾರ ನೀಡಲಿದ್ದಾರೆ. ನಾವು ಈಗ ಒಂದಾಗಿದ್ದೇವೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರು ಕುಮಾರ್ ಬಂಗಾರಪ್ಪ ಅವರ ಸಖ್ಯ ತೊರೆದಿರುವ ನಮೋ ವೇದಿಕೆ ತಮ್ಮನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿಕೆ ನೀಡುತ್ತಾರೆ. ನಾವು ಯಾರಿಗೂ ಚುನಾವಣೆಗಾಗಿರುವ ಸರಕು ಅಲ್ಲ.ನಮ್ಮನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಸಲುವಾಗಿ ಅಪಪ್ರಚಾರ ಮಾಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ನಮ್ಮ ಉದ್ದೇಶ ಕುಮಾರ್ ಬಂಗಾರಪ್ಪ ಬದಲಾವಣೆ ಮಾಡುವುದಾಗಿತ್ತು. ಅವರ ದುರಂಹಕಾರದ ನಡೆ ಬಗ್ಗೆ ಬಿಜೆಪಿ ಮುಖಂಡರಿಗೆ ತಿಳಿಸಿದರೂ ಟಿಕೆಟ್ ನೀಡಿದ್ದಾರೆ. ಅವರನ್ನು ಸೋಲಿಸುವುದು ನಮೋ ವೇದಿಕೆ ಗುರಿಯಾಗಿದೆ. ನಮ್ಮ ಈ ನಿಲುವಿನಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಸ್ಪಷ್ಟಪಡಿಸಿದರು.ಸ್ವಾಭಿಮಾನಿ ಕಾರ್ಯಕರ್ತರ ಹಿತದೃಷ್ಟಿಯಿಂದ ಹಾಗೂ ಪಕ್ಷದ ದೃಷ್ಟಿಯಿಂದ ಕುಮಾರ್ ಬಂಗಾರಪ್ಪ ಅವರನ್ನು ಬದಲಾಯಿಸುವಂತೆ ಹೈಕಮಾಂಡ್ ಗೆ ತಿಳಿಸಲಾಗಿತ್ತು. ಟಿಕೆಟ್ ಕೊಟ್ಟ ಮೇಲೆ ಅನುಭವಿಸಬೇಕು. ತಾಲ್ಲೂಕು ಅಧ್ಯಕ್ಷರು ಬಿಜೆಪಿಗೂ ನಮೋ ವೇದಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿದ್ದವರಿಗೆ ಈಗ ನಮ್ಮ ಬಗ್ಗೆ ಹೇಗೆ ಸಹಾನುಭೂತಿ ಮೂಡಿತು ಎಂದು ಪ್ರಶ್ನಿಸಿದ ಅವರು, ನಮೋ ವೇದಿಕೆಯನ್ನು ಒಂದೇ ಗುರಿ ಇಟ್ಟುಕೊಂಡು ಹುಟ್ಟು ಹಾಕಿದ್ದೇವೆ. ವಿಲೀನವಾಗುವ ಪ್ರಶ್ನೆಯೇ ಇಲ್ಲ. ನಮೋ ವೇದಿಕೆಯಿಂದ ಅಭ್ಯರ್ಥಿ ಕಣಕ್ಕಿಳಿಸುವುದಿಲ್ಲ. ಏ. 24ರ ನಂತರ ನಮೋ ವೇದಿಕೆ ಯಾರನ್ನು ಬೆಂಬಲಿಸಲಿದೆ ಎನ್ನುವುದನ್ನು ತಿಳಿಸಲಾಗುತ್ತದೆ ಎಂದರು.ಮುಖಂಡರಾದ ಮಂಜಪ್ಪ ನೇರಲಗಿ, ಮಲ್ಲಿಕಾರ್ಜುನ ಗುತ್ತೇರ್, ಗಜಾನನರಾವ್ ಉಳವಿ, ಎ.ಎಲ್.ಅರವಿಂದ್, ಡಿ.ಶಿವಯೋಗಿ, ಮೋಹನ್, ಚಂದ್ರಪ್ಪ ಬರಗಿ, ಅರುಣಕುಮಾರ್, ಗಣಪತಿ ಕಪ್ಪಗಳಲೆ, ಸಂಜೀವಾಚಾರ್, ಅಶೋಕ ಅಂಡಿಗೆ, ನಾಗರಾಜಗೌಡ, ಹರೀಶ್ ಇದ್ದರು.