ಕುಮಾರಸ್ವಾಮಿ, ಪ್ರಿಯಾಂಕ್ ವಿರುದ್ಧ ಅರಗ ಜ್ಞಾನೇಂದ್ರ ವಾಗ್ದಾಳಿ

ಕಲಬುರಗಿ ನ 20: ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರ ತರಹ ದಿನಕ್ಕೆ ಎರಡು ಬಾರಿ ಕ್ಯಾಮರಾ ಮುಂದೆ ನಿಲ್ಲಕ್ಕೆ ನಮಗೆ ಆಗಲ್ಲ.ಅವರಂತೆ ಮಾಡಲಿಕ್ಕೆ ಆಗಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿ ಇಂದು ಮಾಧ್ಯಮದವರ ಜತೆಗೆ ಮಾತನಾಡಿ, ಬೆಂಗಳೂರಿನಲ್ಲಿ ಇದ್ದು ಮೀಟಿಂಗ್ ಮಾಡಿದ್ರೆ ಹಳ್ಳಿ ಕಡೆ ಹೋಗ್ತಿಲ್ಲ ಅಂತಾರೆ. ಹಳ್ಳಿ ಕಡೆ ಹೋಗ್ತಿದ್ರೆ ಶಂಖ ಊದಿಕೊಂಡು ಓಡಾಡ್ತಿದ್ದಾರೆ ಅಂತಾರೆ. ನಾವೇನ್ ಕುಮಾರಸ್ವಾಮಿ ಹತ್ರ ಕೇಳಿ ಕೆಲಸ ಮಾಡಬೇಕಾ ? ಏನು ಎಂದು ಪ್ರಶ್ನಿಸಿದರು.
ಜನರ ಕಷ್ಟ ಅರ್ಥ ಮಾಡಿಕೊಳ್ಳುವ ಕೆಲಸ ನಾವು ಮಾಡ್ತಿದ್ದೇವೆ. ನಾಲ್ಕು ತಂಡಗಳಾಗಿ ರಾಜ್ಯದಲ್ಲಿ ಓಡಾಡ್ತಿದ್ದೇವೆ. ಜನರ ಕಷ್ಟಗಳನ್ನು ನಾವು, ಸಿಎಂ ಎಲ್ಲರೂ ನೋಡ್ತಿದ್ದೇವೆ ಎಂದರು.
ಬಿಟ್ ಕಾಯಿನ್ ಪ್ರಕರಣ 2018 ನೇ ಇಸವಿಯಲ್ಲಿ ಶ್ರೀಕಿ ಅರೆಸ್ಟ್ ಮಾಡಿದಾಗ ಪ್ರಕರಣ ಮುಚ್ಚಿಹಾಕಿದರು. ಮುಚ್ಚಿ ಹಾಕಿರೋದನ್ನು ನಾವು ಬಿಚ್ಚಿ ಹಾಕಿದ್ದೇವೆ
ಶ್ರೀಕಿ ಹ್ಯಾಕರ್ ಅಂತ ನಾವು ಬೆಳಕಿಗೆ ತಂದಿದ್ದೇವೆ.ಅತ್ಯಂತ ಪಾರದರ್ಶಕವಾಗಿ ತನಿಖೆ ನಡೆಸುತ್ತಿದ್ದೇವೆ ಎಂದರು.
ಕಾಂಗ್ರೆಸ್ ನವರ ಮಕ್ಕಳಿಗೆ ಡ್ರಗ್ಸ್ ತರಿಸಿಕೊಡುತ್ತಿದ್ದ.ಗೋವಾದಲ್ಲಿ ಕಾಂಗ್ರೆಸ್ ನವರ ಮಕ್ಕಳ ಜೊತೆಗೆ ಸಿಕ್ಕಿದ್ದ. ಶ್ರೀಕಿನಾ ಹಿಡಿದು ತನಿಖೆ ಮಾಡಿದ್ದೆ ತಪ್ಪು ಅನ್ನೋ ಹಾಗೆ ಮಾತಾಡ್ತಿದ್ದಾರೆ ಎಂದು ಹೇಳಿದರು.
ಬಿಟ್ ಕಾಯಿನ್ ಹಗರಣದಲ್ಲಿ ಸಿಎಂ ತಲೆದಂಡ ಆಗುತ್ತೆ ಅನ್ನೋ ಪ್ರಿಯಾಂಕ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಏನು ಬೇಕಾದರೂ ಹೇಳುತ್ತಾರೆ, ಪ್ರಿಯಾಂಕ ಪಾಂಡಿತ್ಯ ಪ್ರದರ್ಶನ ಮಾಡ್ತಿದ್ದಾರೆ.ಐಟಿ ಬಿಟಿ ಸಚಿವರಿದ್ದಾಗ ಯಾಕೆ ಹಿಡಿಯಲಿಲ್ಲ. ಅವನು ಹ್ಯಾಕರ್ ಅಂತಾ ನಿಮಗೆ ಗೊತ್ತಾಗಲಿಲ್ಲವಾ ? ಕಾಂಗ್ರೆಸ್ ಸರ್ಕಾರದಲ್ಲಿ ಐಟಿಬಿಟಿ ಮಂತ್ರಿಯಾಗಿ ನೀವ್ಯಾಕೆ ಹಿಡಿಲಿಲ್ಲ .ಸಿಎಂ ತಲೆದಂಡದ ಯಾಕೆ ಆಗುತ್ತೆ. ನಿಮ್ ತಲೆದಂಡನೇ ಆಗುತ್ತೆ ಎಂದು ಪ್ರಿಯಾಂಕ ಖರ್ಗೆ ವಿರುದ್ಧ ಗೃಹ ಮಂತ್ರಿ ಅರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನವರು ಬೊಮ್ಮಾಯಿ ಸರ್ಕಾರದಲ್ಲಿ ನಿರುದ್ಯೋಗಿಗಳಾಗಿದ್ದಾರೆ . ಅವರಿಗೆ ಏನು ಸಿಗುತ್ತಿಲ್ಲ. ಅದಕ್ಕಾಗಿ ಹಲ್ಲು ಮಸೆಯುತ್ತಿದ್ದಾರೆ ಅಷ್ಟೇ ಎಂದು ತಿರುಗೇಟು ನೀಡಿದರು.