
ರಾಮನಗರ.ಮೇ೧೮:ಚುನಾವಣೆಯಲ್ಲಿ ಸೋತ ಬಳಿಕ ಮಾಜಿ ಸಚಿವ ಸಿಪಿ ಯೋಗೇಶ್ವರ್ ಚನ್ನಪಟ್ಟಣದಲ್ಲಿ ಸೋಲಿಗೆ ಕಾರಣ ಮತ್ತು ಮುಂದಿನ ನಿರ್ಧಾರದ ಕುರಿತು ಮಾತನಾಡಿದ್ದಾರೆ.
ರಾಮನಗರ: ಮಾಜಿ ಸಿಎಂ ಕುಮಾರಸ್ವಾಮಿಯವರು ಚುನಾವಣೆ ಮುಗಿದ ತಕ್ಷಣ ಕಿಂಗ್ ಮೇಕರ್ ಆಗುತ್ತೇನೆಂಬ ಆಸೆಯಿಂದ ವಿದೇಶಕ್ಕೆ ಹಾರಿದ್ದರು.
ಆದರೆ ಕರೆಯಲು ಯಾರೂ ಹೋಗದ ಕಾರಣ ಅವರೇ ವಾಪಸ್ ಬರಬೇಕಾಯಿತು ಎಂದು ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಲೇವಡಿ ಮಾಡಿದ್ದಾರೆ. ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಹೆಚ್‌ಡಿ ಕುಮಾರಸ್ವಾಮಿಯವರು ಚನ್ನಪಟ್ಟಣಕ್ಕೆ ಬರಬಾರದಿತ್ತು. ಅದಕ್ಕಾಗಿಯೇ ನಾನು ಸೋತಿದ್ದೇನೆ. ನನ್ನನ್ನು ಸೋಲಿಸಿದವರೂ ಸಹ ಸಂಪೂರ್ಣವಾಗಿ ಸೋತು ಹೋಗಿದ್ದಾರೆ. ಜೊತೆಗೆ ತಮ್ಮ ಮಗನನ್ನು ಸೋಲಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಚುನಾವಣೆಗಳು ಬರುತ್ತಲೇ ಇರುತ್ತವೆ. ನಾನು ಐದು ಬಾರಿ ಶಾಸಕನಾಗಿದ್ದೇನೆ. ನಾಲ್ಕು ಬಾರಿ ಸೋತಿದ್ದೇನೆ. ಜನ ಕಾಂಗ್ರೆಸ್‌ಗೆ ಹೋಗಬೇಕಿತ್ತು, ಪಕ್ಷೇತರವಾಗಿ ಸ್ಪರ್ಧಿಸಬೇಕಿತ್ತು ಎಂದು ಮಾತನಾಡುತ್ತಿದ್ದಾರೆ. ಇದೇನು ಕೊನೆಯ ಚುನಾವಣೆಯಲ್ಲ. ನಾನು ಸೋತಿದ್ದರೂ ಜನರ ಮುಂದೆ ಬಂದಿದ್ದೇನೆ. ನನ್ನ ಗೆಲ್ಲಿಸಬೇಕೆಂದು ಶ್ರಮಪಟ್ಟವರಿಗೆ ಧನ್ಯವಾದ ಎಂದರು.
ಒಕ್ಕಲಿಗ ಜನಾಂಗದ ವ್ಯಕ್ತಿ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಾರೆ ಎಂಬ ಅಂಧ ಅಭಿಮಾನದಿಂದ ಜನ ಮತ ನೀಡಿದ್ದರಿಂದ ನಾನು ಸೋತಿದ್ದೇನೆ. ಬಹುಮತ ಪಡೆದಿರುವ ಕಾಂಗ್ರೆಸ್ ಸರ್ಕಾರ ತೂಕದ ಸರ್ಕಾರವಾಗಿದೆ. ಬಹುತೇಕ ಹಿರಿಯರು ಗೆದ್ದಿದ್ದಾರೆ. ಸರಿದೂಗಿಸಿಕೊಂಡು ಹೋಗುವುದು ಕಷ್ಟಸಾಧ್ಯ. ಮುಂದಿನ ಐದು ವರ್ಷಗಳ ಕಾಲ ಈ ಸರ್ಕಾರ ಏನಾಗುತ್ತದೆಯೋ ಎಂಬುದನ್ನು ಹೇಳಲು ಆಗುವುದಿಲ್ಲ ಎಂದು ಯೋಗೇಶ್ವರ್? ತಿಳಿಸಿದರು?.