ಕುಮಾರಸ್ವಾಮಿಯವರು 224 ಸ್ಥಾನಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕಲಿ: ಸಚಿವ ಅಶೋಕ್ ಸವಾಲು

ಕಲಬುರಗಿ,ಜ.13: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಅವರು ಮೊದಲು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿ ಎಂದು ರಾಜ್ಯದ ಕಂದಾಯ ಸಚಿವ ಆರ್. ಅಶೋಕ್ ಅವರು ಸವಾಲು ಹಾಕಿದರು.
ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಇದು ಕೊನೆಯ ಚುನಾವಣೆಯಾಗಲಿದೆ ಎಂಬ ಕುಮಾರಸ್ವಾಮಿಯವರ ಟೀಕೆಗೆ ತಿರುಗೇಟು ನೀಡಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರು ಮುಖ್ಯಮಂತ್ರಿಗಳಾಗಿದ್ದಾಗ ಜೆಡಿಎಸ್ 113 ಸ್ಥಾನಗಳನ್ನ ಹೊಂದಿತ್ತು. ನಂತರದ ಚುನಾವಣೆಯಲ್ಲಿ ಜೆಡಿಎಸ್ 57 ಸ್ಥಾನಕ್ಕೆ ಕುಸಿಯಿತು. ಕಳೆದ ಚುನಾವಣೆಯಲ್ಲಿ 37ಕ್ಕೆ ಬಂದಿದೆ. ಅದೂ ಜೆಡಿಎಸ್‍ನಿಂದ ಕಾಂಗ್ರೆಸ್ಸಿಗೆ ಸೇರಿದ ಶ್ರೀನಿವಾಸಗೌಡ ಅವರು ಇನ್ನೂ ಜೆಡಿಎಸ್‍ನ ಐದಾರು ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ಜೆಡಿಎಸ್‍ನ ಬಲವು ಈಗ 25ರಿಂದ 26ಕ್ಕೆ ಹೋಗಿದೆ. ಪ್ರತಿ ಚುನಾವಣೆಯಲ್ಲಿ ಜೆಡಿಎಸ್ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಬರುವ ಚುನಾವಣೆಯಲ್ಲಿ ಎಲ್ಲ 224 ಕ್ಷೇತ್ರಗಳಲ್ಲಿ ಆ ಪಕ್ಷ ಅಭ್ಯರ್ಥಿಗಳನ್ನು ನಿಲ್ಲಿಸಲು ಆಗದಂತಹ ಪರಿಸ್ಥಿತಿ ಉದ್ಭವಿಸಿದೆ ಎಂದು ಅವರು ಲೇವಡಿ ಮಾಡಿದರು.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನ ಮೇಲೆ ಬಿಜೆಪಿ ಮತಗಳನ್ನು ಕೇಳುತ್ತಿದೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಆರ್. ಅಶೋಕ್ ಅವರು, ಮೋದಿ ಅವರಿಂದ ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ಅದಕ್ಕಾಗಿಯೇ ಪ್ರಧಾನಿಯವರು ಹಕ್ಕು ಪತ್ರಗಳನ್ನು ಕೊಡಲು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಲಂಬಾಣಿ ಸಮುದಾಯಕ್ಕೆ ಹಕ್ಕುಪತ್ರಗಳನ್ನು ಪ್ರಧಾನಿ ಕೊಟ್ಟರೆ ಕುಮಾರಸ್ವಾಮಿ ಅವರಿಗೇಕೆ ಹೊಟ್ಟೆಕಿಚ್ಚು? ಎಂದು ಖಾರವಾಗಿ ಪ್ರಶ್ನಿಸಿದರು.
ಜಿಲ್ಲಾಧಿಕಾರಿಗಳ ಮೂಲಕ ಫಲಾನುಭವಿಗಳನ್ನು ಬಸ್‍ಗಳ ಮೂಲಕ ಒತ್ತಾಯಪೂರ್ವಕವಾಗಿ ಮಳಖೇಡಕ್ಕೆ ಕರೆತರಲಾಗುತ್ತಿದೆ ಎಂಬ ಆರೋಪಕ್ಕೆ ಆಕ್ಷೇಪಿಸಿದ ಸಚಿವರು, ಅದು ಜೆಡಿಎಸ್‍ನ ಸಂಸ್ಕøತಿ ಇರಬಹುದು. ಜೀವನದಲ್ಲಿ ನಿರ್ವಸತಿಕರಿಗೆ ಮನೆ ಕೊಟ್ಟು, ಅವರ ಹೆಸರಿನಲ್ಲಿ ನೊಂದಣಿ ಮಾಡಿಕೊಡುವುದರ ಮೂಲಕ ಅಧಿಕೃತ ಪ್ರಮಾಣಪತ್ರವನ್ನು ಪ್ರಧಾನಿಯಿಂದ ಕೊಡಿಸುತ್ತೇವೆ. ಫಲಾನುಭವಿಗಳೂ ಸಹ ಇದರಿಂದ ಸಂತೋಷಪಡುತ್ತಾರೆ. ಇಂತಹ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಪ್ರಧಾನಿಯವರು ಹಕ್ಕುಪತ್ರಗಳನ್ನು ಕೊಡುವುದಕ್ಕೆ ಸ್ವಾಗತಿಸಬೇಕು. ಅದನ್ನು ಬಿಟ್ಟು ಹೊಟ್ಟೆಕಿಚ್ಚು ಪಡುತ್ತಿದ್ದಾರೆ ಎಂದು ಅವರು ಅಣಕಿಸಿದರು.
ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕೆಪಿಸಿಸಿಐ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಸ್ ಯಾತ್ರೆ ಚಾಲನೆ ನೀಡುವ ಸಂದರ್ಭದಲ್ಲಿ ಪ್ರತಿ ಮನೆಗೆ 200 ಯೂನಿಟ್‍ವರೆಗೆ ಉಚಿತ ವಿದ್ಯುತ್ ಕೊಡುವುದಾಗಿ ಘೋಷಿಸಿದ್ದಾರೆ. ಇದು ಚುನಾವಣೆಯ ಗಿಮಿಕ್ ಎಂದು ಟೀಕಿಸಿದ ಸಚಿವ ಆರ್. ಅಶೋಕ್ ಅವರು, ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಿದ್ಯುತ್ ಲೋಡ್ ಶೆಡ್ಡಿಂಗ್‍ನಿಂದಾಗಿ ಕರ್ನಾಟಕ ಕತ್ತಲೆಯಲ್ಲಿತ್ತು. ವಿದ್ಯಾರ್ಥಿಗಳು ರಾತ್ರಿ ಸಮಯದಲ್ಲಿ ವಿದ್ಯುತ್ ಸ್ಥಗಿತಗೊಂಡಿದ್ದರಿಂದ ಶಾಪ ಹಾಕಿದ್ದರು. ಈಗ ನಮ್ಮ ಬಿಜೆಪಿ ಸರ್ಕಾರ ಬಂದ ಮೇಲೆ ಕತ್ತಲೆ ಮುಕ್ತ ಕರ್ನಾಟಕವಾಗಿದೆ. ಅಲ್ಲದೇ ಸಮರ್ಪಕ ವಿದ್ಯುತ್ ಉತ್ಪಾದನೆಯಾಗಿದೆ. ಲೋಡ್ ಶೆಡ್ಡಿಂಗ್ ಜಾರಿಯಲ್ಲಿ ಇಲ್ಲ. ಅಲ್ಲದೇ ಎಸ್‍ಸಿ, ಎಸ್‍ಟಿಗಳಿಗೆ ನಾವು ಈಗಾಗಲೇ ಉಚಿತ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಎದುರಿಸಿ ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ. ಇದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಹೇಳಿದ ಅವರು, ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿಗಳು ಈಗಾಗಲೇ ಪಕ್ಷದ ಕೇಂದ್ರ ವರಿಷ್ಠರೊಂದಿಗೆ ಮಾತನಾಡಿ ಬಂದಿದ್ದಾರೆ. ವರಿಷ್ಠರು ಸೂಚಿಸಿದ ತಕ್ಷಣ ಸಂಪುಟ ವಿಸ್ತರಣೆಯಾಗಲಿದೆ ಎಂದು ಅವರು ಹೇಳಿದರು.
ಇನ್ನು ಸ್ಯಾಂಟ್ರೋ ರವಿಯನ್ನು ನಾವು ಎಲ್ಲಿದ್ದರೂ ಸಹ ಬಂಧಿಸುತ್ತೇವೆ. ಆತ ಕಳೆದ 15- 20 ವರ್ಷಗಳಿಂದ ಇಂತಹ ಕಾರ್ಯಗಳನ್ನು ಮಾಡುತ್ತಿದ್ದಾನೆ. ಆತನ ಆಸ್ತಿ, ಪಾಸ್ತಿಗಳನ್ನು ಜಪ್ತಿ ಮಾಡಿಕೊಳ್ಳುತ್ತೇವೆ. ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ. ಎಲ್ಲ ಅಕ್ರಮಗಳನ್ನು ಬಯಲಿಗೆಳೆದು ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಆರ್. ಅಶೋಕ್ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಒಕ್ಕಲಿಗ ಸಮುದಾಯದ ಸ್ವಾಮೀಜಿಯವರು ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗುತ್ತಾರೆಂಬ ವಿಷಯ ಸತ್ಯಕ್ಕೆ ದೂರವಾಗಿದೆ. ಅಂತಹ ಯಾವುದೇ ಚರ್ಚೆ ಪಕ್ಷದ ಮಟ್ಟದಲ್ಲಿ ಆಗಿಲ್ಲ. ಆ ಕುರಿತು ಸ್ವತ: ಒಕ್ಕಲಿಗ ಸಮುದಾಯದ ಸ್ವಾಮೀಜಿ ನಿರ್ಮಲಾನಂದ್ ಮಹಾಸ್ವಾಮೀಜಿಯವರು ರಾಜಕೀಯಕ್ಕೆ ಬರುವುದನ್ನು ಸ್ವತ: ತಳ್ಳಿ ಹಾಕಿದ್ದಾರೆ. ಇಂದೇ ನಾನು ಅವರೊಂದಿಗೆ ಇದ್ದಾಗ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕರಾದ ದತ್ತಾತ್ರೇಯ್ ಪಾಟೀಲ್ ರೇವೂರ್, ಎನ್. ರವಿಕುಮಾರ್, ಡಾ. ಅವಿನಾಶ್ ಜಾಧವ್, ಶಶೀಲ್ ಜಿ. ನಮೋಶಿ, ಬಿ.ಜಿ. ಪಾಟೀಲ್, ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಗಿ, ನಗರ ಅಧ್ಯಕ್ಷ ಸಿದ್ದಾಜಿ ಪಾಟೀಲ್. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅವಿನಾಶ್ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.