ಕುಮಾರಸ್ವಾಮಿಯವರನ್ನು ಮತ್ತೊಮ್ಮೆ ಸಿಎಂ ಮಾಡಿ: ಹೆಚ್‍ಡಿಡಿ

ಕೆ.ಆರ್.ಪೇಟೆ.ಮೇ.06: ದೇವೇಗೌಡರನ್ನು ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿ ಮಾಡಿದವರು ಮಂಡ್ಯ ಜಿಲ್ಲೆಯ ಜನ. ಈಗ ನಿಮಗೆ ಮತ್ತೊಂದು ಅವಕಾಶ ಒದಗಿ ಬಂದಿದೆ ನಿಮ್ಮ ಹಿತಕ್ಕಾಗಿ ಹೋರಡುತ್ತಿರುವ ಕುಮಾರಸ್ವಾಮಿಯವರನ್ನು ಮತ್ತೊಮ್ಮೆ ನಾಡಿನ ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡ ಮನವಿ ಮಾಡಿದರು.
ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಟಿ.ಮಂಜು ಪರ ಪಟ್ಟಣದ ಪುರಸಭಾ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಬಹಿರಂಗ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆ.ಆರ್.ಪೇಟೆ ಜನರು ಮತ್ತು ತಮಗೂ ಇರುವ ಸಂಬಂಧದ ಬಗ್ಗೆ ಮಾತನಾಡುತ್ತಲೇ ತಮ್ಮ ಮಾತು ಆರಂಭಿಸಿದ ದೇವೇಗೌಡರು 1962 ರಲ್ಲಿ ನಾನು ಮೊದಲ ಬಾರಿಗೆ ಶಾಸಕನಾಗಿದ್ದಾಗ ಒಮ್ಮೆ ಇಲ್ಲಿನ ಹೊಸಹೊಳಲಿನ ಕೆರೆ ಒಡೆದು ಹೋಗಿತ್ತು. ಕೆರೆ ಬಯಲಿನ 8 ಸಾವಿರ ಎಕರೆ ಭತ್ತ ತೆನೆಯಾಗುವ ಹಂತಕ್ಕೆ ಬಂದಿತ್ತು. ಸುದ್ದಿ ತಿಳಿದ ತಕ್ಷಣವೇ ನಾನು ದೆಹಲಿಯಿಂದ ನಡುರಾತ್ರಿ ಇಲ್ಲಿಗೆ ಆಗಮಿಸಿ ಏಣಿ ಹಾಕಿಸಿಕೊಂಡು ಕೆರೆಯ ಒಳಗೆ ಇಳಿದು ಪರಿಶೀಲನೆ ಮಾಡಿದ್ದೆ. ತಾಲೂಕಿನ ಕಟ್ಟೆಕ್ಯಾತನಹಳ್ಳಿ ಬಳಿ ಹೇಮಾವತಿ ನದಿಗೆ ಸೇತುವೆ ಕಟ್ಟಲು ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅಡಿಗಲ್ಲು ಹಾಕಿದ್ದರು. ಆದರೆ ಈ ಸೇತುವೆ ಕಾಮಗಾರಿ ಆರಂಭಿಸಲು ನಿಮ್ಮ ದೇವೇಗೌಡನೇ ಬರಬೇಕಾಯಿತು. ಇದೇ ರೀತಿ ಗೊಂದಿಹಳ್ಳಿ ಸೇತುವೆ ಮತ್ತಿತರ ಹಲವು ಸೇತುವೆಗಳ ನಿರ್ಮಾಣಕ್ಕೆ ನಾನೇ ಬರಬೇಕಾಯಿತು.
ರಾಜ್ಯದಲ್ಲಿಯೇ ಅತೀಹೆಚ್ಚು ದ್ವಿಚಕ್ರ ವಾಹನಗಳು ಈ ತಾಲೂಕಿನಲ್ಲಿವೆ ಎಂದು ಯಾರೋ ಒಬ್ಬರು ಮಹನೀಯರು ನನಗೆ ಹೇಳಿದ್ದರು. ಇದಕ್ಕೆ ಯಾರು ಕಾರಣ. ಕಾವೇರಿ ಜಲ ವಿವಾದವನ್ನು ಲೆಕ್ಕಿಸದೆ ಇಲ್ಲಿಗೆ ಹೇಮಾವತಿ ಯೋಜನೆಯನ್ನು ಪೂರ್ಣಗೊಳಿಸಿದ್ದರ ಪರಿಣಾಮ ಇಲ್ಲಿನ ರೈತರ ಆರ್ಥಿಕ ಶಕ್ತಿ ವೃದ್ದಿಸಿದೆ. ನಾನು ಕಾವೇರಿ ಜಲ ವಿವಾದದ ಹೋರಟ ನಡೆಸುತ್ತಿದ್ದಾಗ ಕೇಂದ್ರದಲ್ಲಿ 18 ಜನ ಬಿಜೆಪಿ ಎಂ.ಪಿ ಗಳಿದ್ದರು. ರಾಜ್ಯದ ಎಸ್.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಮತ್ತು ವೀರಪ್ಪಮೊಯ್ಲಿ ಕೇಂದ್ರ ಸಚಿವರಾಗಿದ್ದರು. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಹೆಳಿದ್ದು ದೇವೇಗೌಡರೇ ತಮಿಳು ನಾಡಿನ 40 ಜನ ಸಂಸದರ ಸಹಕಾರದಿಂದ ನಾನು ಅಧಿಕಾರದಲ್ಲಿದ್ದೇನೆ. ನಿಮಗೆ ಸಹಕರಿಸಿದರೆ ನನ್ನ ಸರ್ಕಾರ ಉಳಿಯುವುದಿಲ್ಲ. ದಯಮಾಡಿ ನ್ಯಾಯಾಲಯಕ್ಕೆ ಹೋಗಿ ಕಾವೇರಿ ವಿವಾದವನ್ನು ಬಗೆಹರಿಸಿಕೊಳ್ಳಿ ಎಂದರು. ರಾಜ್ಯದ ಯಾವೊಬ್ಬ ಸಂಸದರ ನೆರವಿಲ್ಲದೆ ನಾನು ಏಕಾಂಗಿ ಹೋರಾಟ ನಡೆಸಬೇಕಾಯಿತು. ತಾಲೂಕಿಗೆ ಹೇಮಾವತಿ ನೀರು ಹರಸಿದ್ದರ ಪರಿಣಾಮವಾಗಿಯೇ ಹೊಟ್ಟೆ ಪಾಡಿಗಾಗಿ ಭದ್ರಾವತಿ, ಮುಂಬೈ, ಬೆಂಗಳೂರಿನ ಕಡೆಗೆ ಕೂಲಿಗೆ ಹೋಗುತ್ತಿದ್ದ ಜನ ಇಂದು ತಮ್ಮ ತಮ್ಮ ಸ್ವಗ್ರಾಮಗಳಿಗೆ ಬಂದು ನೆಮ್ಮದಿಯ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇದರ ಪರಿಣಾಮವಾಗಿಯೇ ಇಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿದೆ ಎಂದರು.
ಇಲ್ಲಿಗೆ ವಲಸೆ ಬಂದ ರಾಜಕಾರಣಿಯೊಬ್ಬ ಜೆಡಿಎಸ್ ಪಕ್ಷವನ್ನು ಮುಗಿಸುತ್ತೇನೆ ಎಂದು ಹೇಳುತ್ತಿದ್ದಾನೆಂದು ಪರೋಕ್ಷವಾಗಿ ಸಚಿವ ಕೆ.ಸಿ.ನಾರಾಯಣಗೌಡರಿಗೆ ತಿವಿದ ಹೆಚ್.ಡಿ.ದೇವೇಗೌಡ ಜೆಡಿಎಸ್ ಮುಗಿಸುತ್ತೇನೆ ಎನ್ನುವವ ಮಾತು ಕೇಳಿದರೆ ಇಳಿವಯಸ್ಸಿನಲ್ಲಿಯೂ ನನ್ನ ದೇಹದ ಪ್ರತಿಯೊಂದು ರಕ್ತದ ಕಣವೂ ಕುದಿಯುತ್ತದೆ. ಜೆಡಿಎಸ್ ಮುಗಿದೇ ಹೋಯಿತು ಎನ್ನುವವರು ಎಲ್ಲಿಂದ ಬಂದರು. ಜೆಡಿಎಸ್ ಬಗ್ಗೆ ಮಾತನಾಡುವ ಮುನ್ನ ಎಚ್ಚರಿಕೆಯಿಂದ ಇರಿ ಎಂದ ದೇವೇಗೌಡ ನನ್ನ ಜೀವನ ಕಡೆಯ ಉಸಿರಿರುವವರೆಗೂ ನನ್ನ ನೀರಾವರಿ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದರು.
ಮಂಡ್ಯ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೂ ಹೋಗಬೇಕೆಂಬ ಆಸೆಯಿದೆ. ನನ್ನ ವಯಸ್ಸು 90 ದಾಟಿದೆ. ಆದರೂ ಪ್ರಯತ್ನಿಸುತ್ತೇನೆಂದ ಹೆಚ್.ಡಿ.ದೇವೇಗೌಡ ಮಂಡ್ಯ ಜಿಲ್ಲೆಯ ಎಲ್ಲಾ ಏಳು ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಬೇಕು. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಬೇಕು. ಕುಮಾರಸ್ವಾಮಿ ರೂಪಿಸಿರುವ ಪಂಚರತ್ನ ಯೋಜನೆಗಳಿಂದ ನಾಡಿನ ಜನರಿಗೆ ಒಳ್ಳೆಯದಾಗಲಿದೆ ಎಂದರು. ಮುಸ್ಲಿಂ ಮೀಸಲಾತಿಯ ಬಗ್ಗೆ ಪ್ರಸ್ತಾಪಿಸಿದ ದೇವೇಗೌಡರು ಮುಸ್ಲಿಮರಿಗೆ ಮೀಸಲಾತಿ ಮಕೊಟ್ಟಿದ್ದು ನಾವು. ದೇಶದ ಯಾವುದೇ ಪ್ರದಾನಿ ಕಾಶ್ಮೀರಕ್ಕೆ ಕಾಲಿಡಲು ಹೆದರುತ್ತಿದ್ದ ಸನ್ನಿವೇಶದಲ್ಲಿ ಕಾಶ್ಮೀರಕ್ಕೆ ಕಾಲಿಟ್ಟು ಅಲ್ಲಿನ ಜನರ ಪ್ರೀತಿ ಸಂಪಾದಿಸಿದವನು ನಾನು. ಇಂದು ರಾಜ್ಯದಲ್ಲಿ ಲಿಂಗಾಯಿತ, ಹಾಲುಮತ, ನಾಯಕ, ದಲಿತರು ಸೇರಿದಂತೆ ಎಲ್ಲಾ ಸಮುದಾಯದ ಜನ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಕುಮಾರಣ್ಣ ಮುಖ್ಯಮಂತ್ರಿಯಾಗಲು ನಿಮ್ಮ ಕೊಡುಗೆ ಇರಲಿ. ಇಲ್ಲಿನ ನಮ್ಮ ಅಭ್ಯರ್ಥಿ ಹೆಚ್.ಟಿ.ಮಂಜು ಅವರನ್ನು ಗೆಲ್ಲಿಸಿ ಎಂದು ದೇವೇಗೌಡ ಮನವಿ ಮಾಡಿದರು.
ಅಭ್ಯರ್ಥಿ ಹೆಚ್.ಟಿ.ಮಂಜು, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್ ಜಾನಕೀರಾಂ, ರಾಜ್ಯ ಸಹಕಾರ ಮಾರಾಟ ಮಂಡಲಿಯ ನಿರ್ದೇಶಕರಾದ ಚೋಳೇನಹಳ್ಳಿ ಪುಟ್ಟಸ್ವಾಮೀಗೌಡ, ಮುಖಂಡರಾದ ಎಂ.ಬಿ.ಹರೀಶ್, ಎ.ಆರ್.ರಘು, ನೆಲ್ಲಿಗೆರೆ ಬಾಲು, ಹೆಚ್.ಕೆ.ಅಶೋಕ್, ಸೇರಿದಂತೆ ಹಲವರಿದ್ದರು.