
ವಿಜಯಪುರ :ಎ.30: ನಗರದ ಕುಮಾರವ್ಯಾಸ ಭಾರತ ಭವನದಲ್ಲಿ, ಶ್ರೀ ಕುಮಾರವ್ಯಾಸ ಭಾರತ ವೇದಿಕೆಯಿಂದ ಯೋಗೀಂದ್ರ ಕವಿ ಕುಮಾರವ್ಯಾಸರ ಜಯಂತಿಯನ್ನು ಸಂಭ್ರಮ-ಸಡಗರದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಮಾಂಭವು ನಾಡಗೀತೆ `ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ’ ಎಂಬ ಗೀತೆಯೊಂದಿಗೆ ಆರಂಭವಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಪ್ರಿಯಾ ಪ್ರಾಣೇಶ್ ಹರಿದಾಸ್ ಇವರುಗಳು ದೀಪ ಬೆಳಗಿ ಕುಮಾರವ್ಯಾಸ ಜಯಂತಿಯನ್ನು ಉದ್ಘಾಟಿಸಿದರು. ಆರಂಭದಲ್ಲಿ ವೇದಿಕೆಯ ಸಂಚಾಲಕರಾದ ಕಲ್ಯಾಣರಾವ್ ದೇಶಪಾಂಡೆಯವರು ಸಂಘದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.
ನಂತರ ಹಿರಿಯ ಗಮಕಿಗಳಾದ ಶ್ರೀಮತಿ ಶಾಂತಾ ಕೌತಾಳ ಇವರು ಶ್ರೀವನಿತೆಯರಸನೆ ವಿಮಲ ರಾಜೀವ ಪೀಠನ ಪಿತನೆ' ಎಂಬ ಮಂಗಳಾಚರಣ ಸ್ತುತಿಯೊಂದಿಗೆ ಗಮಕ ಕಾರ್ಯಕ್ರಮವನ್ನು ಆರಂಭಿಸಿದರು. ಅಂದು ಗಮಕಕ್ಕಾಗಿ ಆಯ್ದುಕೊಂಡ ಭಾಗ, ಗದುಗಿನ ಭಾರತದ ವಿರಾಟ ಪರ್ವದ
ಉತ್ತರಾಭಿಮನ್ಯು ಕಲ್ಯಾಣ’ ಎಂಬ ಪ್ರಸಂಗ. ಗಮಕ ವಾಚನದಲ್ಲಿ ಬರುವ ಕೃಷ್ಣನ ಪಾತ್ರ ಹಾಗೂ ಬಂಧು-ಬಳಗದವರ ಸ್ನೇಹ, ಪ್ರೀತಿ, ಮದುವೆಯ ಗಳಿಗೆ ಬಟ್ಟಲು, ಪುಣ್ಯಾಹವಾಚನ, ಅಕ್ಷತೆ ಮುಂತಾದವುಗಳು ಕೇಳುಗರ ಗಮನ ಸೆಳೆದವು. ಗಮಕ ಕಾರ್ಯಕ್ರಮ ನಂತರ ಈ ವರ್ಷದ ಪಿಯುಸಿ (ವಿಜ್ಞಾನ) ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿ ತೇರ್ಗಡೆಯಾದ ಮೂವರು ವಿದ್ಯಾರ್ಥಿನಿಯರಿಗೆ ತಲಾ ರೂ.1000/- ಗಳ ಬಹುಮಾನವನ್ನು ಕೊಡಲಾಯಿತು. ಆ ವಿದ್ಯಾರ್ಥಿನಿಗಳೆಂದರೆ ಕುಮಾರಿ ನಂದಿನಿ ಕುಲಕರ್ಣಿ (96%), ಕುಮಾರಿ ಲಾವಣ್ಯಾ ಜಹಾಗೀರದಾರ (95%), ಕುಮಾರಿ ಚೈತನ್ಯಾ ಗಲಗಲಿ (92%). ಸಹಾಯಧನ ಪಡೆದ ವಿದ್ಯಾರ್ಥಿನಿಯರು ಭಾವಾವೇಶದಿಂದ ಮಾತನಾಡಿ ತಮ್ಮ ಪಾಲಕರ ಬೆಂಬಲ ಹಾಗೂ ಉತ್ತೇಜನದಿಂದಾಗಿ ತಾವು ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾಗಿ ತಿಳಿಸಿದರು. ಅದೇ ರೀತಿ ಪ್ರೋತ್ಸಾಹ ಧನ ನೀಡಿದ ವೇದಿಕೆಯ ಮುಖ್ಯಸ್ಥರಾದ ಶ್ರೀಮತಿ ಶಾಂತಾ ಕೌತಾಳರಿಗೆ ಧನ್ಯವಾದ ಅರ್ಪಿಸಿ ಅವರಿಂದ ಆಶೀರ್ವಾದ ಪಡೆದರು.
ಸಮಾರಂಭದಲ್ಲಿ ಸಂಜೀವ್ ಪ್ರಲ್ಹಾದರಾವ್ ಕುಲಕರ್ಣಿ ಹಾಗೂ ಶ್ರೀಮತಿ ಸಂಧ್ಯಾ ದಂಪತಿಗಳಿಗೆ ಗಡಿಗೆನೀರು (ಖೇಳೋಣ) ಕಾರ್ಯಕ್ರಮದಡಿ ಕಾಣಿಕೆಯನ್ನು ನೀಡಲಾಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಪ್ರಿಯಾ ಹರಿದಾಸ್ ಇವರು ವಿದ್ಯಾರ್ಥಿಗಳು ವಿಜ್ಞಾನದೊಂದಿಗೆ ಜ್ಞಾನವನ್ನೂ ಬೆಳೆಸಿಕೊಳ್ಳಬೇಕು. ಹಿಂದಿನ ಸಂಪ್ರದಾಯಗಳಲ್ಲಿ ಉತ್ತಮವಾದಂತಹ ವಿಚಾರಗಳನ್ನು ಇಂದಿನ ಜೀವನದಲ್ಲಿ ಅಳವಡಿಸಿಕೊಂಡು ಯುವತಿಯರು ಹಾಗೂ ಯುವಕರು ವಿದ್ಯೆಯೊಂದಿಗೆ ವಿನಯವನ್ನು ಮೈಗೂಡಿಸಿಕೊಳ್ಳಬೇಕು. ಬರೀ ಮೊಬೈಲ್ ದಾಸರಾಗಿ ವಿದ್ಯಾರ್ಥಿಗಳು ಕಾಲಹರಣ ಮಾಡದೇ ಹಿಂದೂ ಧರ್ಮದ ಗ್ರಂಥಗಳಾದ ರಾಮಾಯಣ, ಮಹಾಭಾರತ ಹಾಗೂ ಭಗವದ್ಗೀತೆ ಇವುಗಳಲ್ಲಿ ಬೋಧಿಸಿದ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು. ಹೀಗೆ ಮಾಡಿದಾಗ ಮುಂದಿನ ಜನಾಂಗದ ಭವಿಷ್ಯವು ಉತ್ತಮವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು. ಅತಿಥಿಗಳಾದ ಪ್ರಿಯಾ ಹಾಗೂ ಪ್ರಾಣೇಶ್ ಹರಿದಾಸ್ ಇವರುಗಳಿಗೆ ಕಲ್ಯಾಣರಾವ್ ದೇಶಪಾಂಡೆ ಹಾಗೂ ಪ್ರಮಿಳಾ ದಂಪತಿಗಳಿಂದ ಶಾಲು ಹೊದಿಸಿ ಫಲ-ಪುಷ್ಪ ನೀಡಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಮಂಜುಳಾ ಪಾಟೀಲ್, ವಿಜಯೀಂದ್ರ ಪಾಟೀಲ್, ಹಿರಿಯ ಪತ್ರಕರ್ತ ಬಾಬುರಾವ್ ಕುಲಕರ್ಣಿ, ಆನಂದ್ ಕುಲಕರ್ಣಿ, ಸಂಜೀವ್ ಕುಲಕರ್ಣಿ, ಶ್ರೀಮತಿ ವಿಮಲಾಬಾಯಿ ಪ್ರ. ಕುಲಕರ್ಣಿ, ಶ್ರೀಮತಿ ಅನುರಾಧಾ ಜಹಾಗೀರದಾರ್, ಶ್ರೀಮತಿ ಹೇಮಾ ಜೋಶಿ, ಶ್ರೀಮತಿ ವೀಣಾ ಪಾಟೀಲ್, ಕುಮಾರಿ ಶಿಲ್ಪಾ ಪಾಟೀಲ್ ಹಾಗೂ ವಿದ್ಯಾರ್ಥಿನಿಯರ ಪಾಲಕರು ಭಾಗವಹಿಸಿದ್ದರು. ಸಭೆಯ ಮುಕ್ತಾಯದಲ್ಲಿ ಬಾಬುರಾವ್ ಕುಲಕರ್ಣಿಯವರು ಕನಕದಾಸ ವಿರಚಿತ
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ’ ಎಂಬ ಭಕ್ತಿ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.
ಕುಮಾರವ್ಯಾಸ ಜಯಂತಿಯ ಕಾರ್ಯಕ್ರಮವು ಕುಮಾರವ್ಯಾಸರ ದಿವ್ಯ ಸಂದೇಶವನ್ನು ಸಾರುವಲ್ಲಿ ಸಫಲವಾಯಿತು.