ಕುಮಾರವ್ಯಾಸನ ಕವಿತ್ವದ ಸಾಮಥ್ರ್ಯ ಅಪಾರ

ಬೀದರ:ಜ.14:ಕುಮಾರವ್ಯಾಸ ನಡುಗನ್ನಡ ಕಾಲದ ಸೃಜನಶೀಲ ಕವಿಯಾಗಿದ್ದು ಆತನ ಕವಿತ್ವದ ಸಾಮಥ್ರ್ಯ, ಕಾವ್ಯ ಸೌಂದರ್ಯವು ‘ಕರ್ಣಾಟ ಭಾರತ ಕಥಾಮಂಜರಿ’ಯ ಓದಿನಿಂದ ಮನವರಿಕೆಯಾಗುತ್ತದೆ ಎಂದು ಕಪಲಾಪುರದ ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಸೈಬಣ್ಣ ನಾಲವಾರ ಅಭಿಪ್ರಾಯಪಟ್ಟರು.
ಅವರು ಇಂದು ಕರ್ನಾಟಕ ಗಮಕ ಕಲಾ ಪರಿಷತ್ತು ಜಿಲ್ಲಾ ಘಟಕದಿಂದ ಆಯೋಜಿಸಿದ ಕುಮಾರವ್ಯಾಸ ಜಯಂತಿಯನ್ನು ಉದ್ಘಾಟಿಸಿ ಮಾತನಾಡುತ್ತ ಸಮಸ್ತ ವ್ಯಾಸಭಾರತವನ್ನು ಕಾವ್ಯದ ವಸ್ತುವಾಗಿಸಿಕೊಂಡು ಪಂಪನ ತರುವಾಯ ಸಮಗ್ರಕೃತಿಯನ್ನು ಕನ್ನಡೀಕರಣಗೊಳಿಸುವುದರ ಜೊತೆಗೆ ಕೃಷ್ಣನ ಮಹಿಮೆಯನ್ನು ಬಣ್ಣಿಸಿದ ಶ್ರೇಯಸ್ಸು ಕುಮಾರವ್ಯಾಸನಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು.
ಕುಮಾರವ್ಯಾಸನ ಗದುಗಿನ ಭಾರತಕ್ಕೆ ಶ್ರೀಕೃಷ್ಣನೇ ಕಥಾನಾಯಕ. ಮನುಷ್ಯನಂತೆ ತೋರುವ ಆತನದು ಅತಿಮಾನುಷ ಚೈತನ್ಯಶಕ್ತಿ. ಆ ಚೈತನ್ಯವು ಎಲ್ಲ ಜೀವ ಚೈತನ್ಯಗಳಿಗೂ ಮೂಲವಾಗಿ, ಎಲ್ಲ ಪ್ರವೃತ್ತಿಗಳಿಗೂ ಕಾರಣವಾಗಿ ಪ್ರಕಟಗೊಂಡಿದ್ದು ಕೃಷ್ಣ ನಿದ್ರಿಸುತ್ತಿದ್ದರೂ ಕುಮಾರವ್ಯಾಸನಿಗದು ‘ಭ್ರಾಂತಿಯೋಗ’ವಾಗಿ ಕಂಡುಬರುತ್ತದೆ. ಸಾಮಾನ್ಯವಾಗಿ ಕೃಷ್ಣ ಧರ್ಮಪರವಾಗಿ, ಪಾಂಡವರ ಪಕ್ಷಪಾತಿಯಾಗಿ, ಅಧರ್ಮವನ್ನು ಮೆಟ್ಟಿನಿಲ್ಲುವ ಮಹಾನಾಯಕವಾಗಿ ಕಂಡುಬರುತ್ತಾನೆ ಎಂದು ಕರ್ನಾಟಕ ಗಮಕ ಕಲಾ ಪರಿಷತ್ತಿನ ಬೀದರ ಜಿಲ್ಲಾ ಘಟಕದ ಅಧ್ಯಕ್ಷ ರಘುಶಂಖ ಭಾತಂಬ್ರಾ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಶೋಭಾವತಿ ಮಂಗಳೂರೆ, ಜಗದೇವಿ ಲದ್ದೆ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.