ಕುಮಾರಣ್ಣ ಮತ್ತೆ ಸಿಎಂ ಆಗುವುದರಲ್ಲಿ ಸಂಶಯವಿಲ್ಲ

ಚನ್ನಪಟ್ಟಣ, ಏ.೨೭- ಜೆಡಿಎಸ್ ಪಕ್ಷದ ಜನಪರ ಆಡಳಿತ ಹಾಗೂ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ದಿ ಕಾರ್ಯಗಳೇ ಈ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರವರು ಜನರ ಆಶೀರ್ವಾದ ಪಡೆದು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುವುದರಲ್ಲಿ ಸಂಶಯವೇ ಇಲ್ಲ ಎಂದು ರಾಮನಗರ ಕ್ಷೇತ್ರದ ಶಾಸಕಿ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ ಅನಿತಾಕುಮಾರಸ್ವಾಮಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಪ್ರಸಿದ್ದ ಶ್ರೀಕೆಂಗಲ್ ಅಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ರಾಜ್ಯದಲ್ಲಿ ಎರಡು ಭಾರಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿರವರು ರಾಜ್ಯದ ಇತಿಹಾಸದಲ್ಲಿ ಯಾವ ಮುಖ್ಯ ಮಂತ್ರಿಯು ನೀಡದ ಅಭಿವೃದ್ದಿಕಾರ್ಯಗಳನ್ನು ಮಾಡಿರುವ ಹಾಗೂ ರಾಜ್ಯದಲ್ಲಿ ತನ್ನದೇ ಆದ ಚಿಂತನೆಗಳ ಮುಖಾಂತರ ಸರ್ವಜನಾಂಗೀಯರ ಕಲ್ಯಾಣಕ್ಕೆ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದ ಕುಮಾರಸ್ವಾಮಿರವರನ್ನು ಕ್ಷೇತ್ರದ ಜನರು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಲು ಕಾತುರತೆಯಿಂದ ಕಾಯುತ್ತಿದ್ದಾರೆಂದರು.
ಜೆಡಿಎಸ್ ಪಕ್ಷದ ಪಂಚರತ್ನಯಾತ್ರೆಯ ಮುಖಾಂತರ ರಾಜ್ಯದ ಜನತೆಯ ಮನಗೆದ್ದಿರುವ ಕುಮಾರಸ್ವಾಮಿರವರು ನುಡಿದಂತೆ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿರುವ ಎಲ್ಲಾ ಭರವಸೆಗಳನ್ನು ಹಿಡೇರಿಸುವುದರಲ್ಲಿ ಅನುಮಾನವೇ ಇಲ್ಲ, ರಾಜ್ಯದ ರೈತರಿಗೆ ಭರವಸೆ ನೀಡಿದಂತೆ ೨೫ ಸಾವಿರ ಕೋಟಿ ಸಾಲವನ್ನು ಮನ್ನ ಮಾಡುವುದರ ಮುಖಾಂತರ ದೇಶದ ಮಾದರಿ ಮುಖ್ಯಮಂತ್ರಿಯಾಗಿ ಹೆಸರು ಪಡೆದವರು ಎಂದರು.
ರಾಜ್ಯವ್ಯಾಪ್ತಿ ದಿನದ ೨೪ ತಾಸುಗಳು ಕೂಡ ರಾಜ್ಯದ ಜನರ ಹಿತದೃಷ್ಟಿಯಿಂದ ೨೦೨೩ಕ್ಕೆ ರಾಜ್ಯದಲ್ಲಿ ಸ್ವಂತಬಲದ ಮೇಲೆ ಜೆಡಿಎಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚಾರ ಮಾಡಿ,ತಮ್ಮ ಆರೋಗ್ಯವನ್ನು ಬದಿಗೊತ್ತಿ ರಾಜ್ಯದ ಜನರ ಕಲ್ಯಾಣಕ್ಕೆ ಶ್ರಮಪಡುತ್ತಿದ್ದಾರೆಂದು ತಿಳಿಸಿದರು.
ಕೆಲದಿನಗಳ ಹಿಂದೆ ಆರೋಗ್ಯದಲ್ಲಿ ವ್ಯಾತ್ಯಾಸವಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಪಕ್ಷ ಸಂಘಟನೆ ಹಾಗೂ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಬರುವುದು ಖಚಿತವಾಗಿದೆ ಎಂದು ಸರ್ವಜನರ ಕಲ್ಯಾಣಕ್ಕೆ ರೂಪಿಸಬಹುದಾದ ಯೋಜನೆಗಳ ಬಗ್ಗೆ ಆಸ್ಪತ್ರೆಯಿಂದಲೇ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಲಹೆ ಸೂಚನೆ ನೀಡುತ್ತಿದ್ದಾರೆ ಎಂದು ತಿಳಿಸಿದ ಅವರು ಕುಮಾರಸ್ವಾಮಿರವರಿಗೆ ತಮ್ಮ ಆರೋಗ್ಯಕ್ಕಿಂತ ರಾಜ್ಯದ ಜನರ ಕ್ಷೇಮ ಮುಖ್ಯವಾಗಿದೆ ಎಂದರು.