ಕುಮಠಳ್ಳಿಯವರ ಮೇಲೆ ಪ್ರೀತಿ ಇದ್ದರೆ ಜಾರಕಿಹೊಳಿ ಗೋಕಾಕ ಕ್ಷೇತ್ರ ಬಿಟ್ಟು ಕೊಡಲಿ : ಚಿದಾನಂದ ಸವದಿ

ಅಥಣಿ :ಮಾ.12: ಬರುವ 2023ರ ಮೇ ತಿಂಗಳಿನಲ್ಲಿ ಜರುಗುವ ವಿಧಾನಸಭೆ ಚುನಾವಣೆಯಲ್ಲಿ ಅಥಣಿಯಿಂದ ನಮ್ಮ ತಂದೆ ಸ್ಪರ್ಧೆಗಿಳಿಯುವುದು ಖಚಿತವಾಗಿದೆ, ಈ ಮೂಲಕ ರಾಜ್ಯ ನಾಯಕರುಗಳಿಗೆ ನಾವು ಸಂದೇಶ ಕೊಡಲು ಬದ್ಧರಾಗಿದ್ದೇವೆ ಎಂದು ಯುವ ಮುಖಂಡ ಹಾಗೂ ಲಕ್ಷ್ಮಣ ಸವದಿ ಸುಪುತ್ರ ಚಿದಾನಂದ ಸವದಿ ಅವರು ಹೇಳಿದರು

ಅವರು ಪಟ್ಟಣದ ಗಚ್ಚಿನಮಠದ ಆವರಣದಲ್ಲಿ ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡುತ್ತಾ ಮುಂಬರುವ ಅಥಣಿ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ತಂದೆಯವರಾದ ಲಕ್ಷ್ಮಣ ಸವದಿ ಅವರು ಸ್ಪರ್ಧಿಸುವುದು ಖಚಿತ ವಾಗಿದೆ, ಈ ಮೂಲಕ ಯಾವುದೇ ಕಾರಣಕ್ಕೆ ಅಥಣಿ ಕ್ಷೇತ್ರವನ್ನು ಬಿಟ್ಟುಕೊಡಲು ನಾವು ಸಿದ್ಧರಿಲ್ಲ ಅದಕ್ಕಾಗಿ ನಿಮ್ಮೆಲ್ಲರ ಆಶೀರ್ವಾದ ನಮಗೆ ಅವಶ್ಯಕ ಎಂದು ಹೇಳಿ ಪರೋಕ್ಷವಾಗಿ ರಮೇಶ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದರು.

ಮೊನ್ನೆ ದಿನಾಂಕ 09 ರಂದು ಅಥಣಿಯಲ್ಲಿ ಜರುಗಿದ ಬಿಜೆಪಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗವಹಿಸಿದ ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಭಾಷಣ ಮಾಡುತ್ತಾ ಈ ಸಲ ಅಥಣಿ ಜನತೆ ಮಹೇಶ ಕುಮಠಳ್ಳಿ ಅವರಿಗೆ ಮತ್ತೋಮ್ಮೆ ಅವಕಾಶ ಕೊಡಿ ಎಂದು ಹೇಳಿ ಸಂಚಲನ ಉಂಟು ಮಾಡಿದ್ದರು, ಅದಕ್ಕೆ ಪೂರಕವೆಂಬಂತೆ ನಿನ್ನೆ ವಿಜಯಪೂರದಲ್ಲಿಯೂ ಕೂಡ ಅವರು ಶಾಸಕ ಮಹೇಶ ಕುಮಠಳ್ಳಿ ಅವರಿಗೆ ಪಕ್ಷ ಟಿಕೇಟ್ ನೀಡದಿದ್ದರೆ ನಾನು ಗೋಕಾಕನಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾತನಾಡಿ ಶಾಸಕ ಕುಮಠಳ್ಳಿ ಅವರಿಗೆ ಟಿಕೆಟ್ ಫಿಕ್ಸ್ ಆದಂತಿದೆ ಎಂದ ಸಂದೇಶ ರವಾನಿಸಿದ್ದು ಇತ್ತ ಲಕ್ಷ್ಮಣ ಸವದಿ ಅವರ ಅಭಿಮಾನಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಅದೇ ರೀತಿ ಇಂದು ಚಿದಾನಂದ ಸವದಿ ಅವರೂ ಕೂಡ ನಾವು ಕೂಡ ಯಾವುದೇ ಕಾರಣಕ್ಕೂ ಅಥಣಿ ಕ್ಷೇತ್ರ ಬಿಟ್ಟುಕೊಡುವ ಮಾತೇ ಇಲ್ಲ, ನಮ್ಮ ತಂದೆ ಸ್ಪರ್ಧೆ ಖಚಿತವಾಗಿದ್ದು ಈ ಮೂಲಕ ರಾಜ್ಯ ನಾಯಕರಿಗೆ ಸಂದೇಶ ಕೊಡಲು ತಯಾರಿದ್ದೆವೆ ಎಂದು ಹೇಳುವ ಮೂಲಕ ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ರಾಜ್ಯ ನಾಯಕರಿಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ..


2004 ರಿಂದ ಸುಮಾರು 15 ವರ್ಷಗಳಿಂದ ಶಾಸಕರಾಗಿ ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ, 2019 ಉಪ ಚುನಾವಣೆಯಲ್ಲಿ ಪಕ್ಷದ ಆದೇಶದಂತೆ ಕ್ಷೇತ್ರ ಬಿಟ್ಟು ಕೊಡಲಾಗಿತ್ತು ಆದರೆ ಈಗ ಬದಲಾದ ಸನ್ನಿವೇಶದಲ್ಲಿ ಈ ಕ್ಷೇತ್ರದ ಜನರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಾಹುಕಾರ ಸ್ಪರ್ದಿಸಲೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ, ಗೋಕಾಕ ಶಾಸಕರಿಗೆ ಕುಮಠಳ್ಳಿಯವರ ಮೇಲೆ ಅಷ್ಟು ಪ್ರೀತಿ ಇದ್ದರೆ ಅವರಿಗೆ ಗೋಕಾಕ ಕ್ಷೇತ್ರ ಬಿಟ್ಟು ಕೊಡಲಿ ಎಂದರು,