ಕುದುರೆ ಮೇಲೆ ಕೂರಿಸದ ಬಾಲಕನಕೊಲೆ ಮೂವರು ಸೆರೆ

ಬೆಂಗಳೂರು,ಏ.9- ದೊಡ್ಡವರನ್ನು ಕುದುರೆ ಮೇಲೆ ಕೂರಿಸುವುದಿಲ್ಲ ಎಂದ ಅಪ್ರಾಪ್ತ ಬಾಲಕನನ್ನು ಆಕ್ರೋಶಗೊಂಡು ಕೊಲೆಗೈದ ಮೂವರನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸತೀಶ್ (15) ಎಂಬ ಬಾಲಕನನ್ನು ಕೊಲೆಗೈದು ಪರಾರಿಯಾಗಿದ್ದ ಸೈಯದ್ ಶೋಯೆಬ್‌, ಸುಹೇಲುಲ್ಲಾ ಷರೀಫ್, ಮಹಮ್ಮದ್ ಹುಸೇನ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ಕಳೆದ ಏ. 3ರಂದು ಕೆ.ಜಿ.ಹಳ್ಳಿ ರೈಲ್ವೆ ಹಳಿ ಬಳಿ ಈ ಕೊಲೆ ನಡೆದಿತ್ತು. ಮಾಸ್ಕ್​ ರಸ್ತೆಯಲ್ಲಿ ಬಾಲಕ ಸತೀಶ್ ಕುದುರೆ ಇಟ್ಟುಕೊಂಡಿದ್ದು, ಮಕ್ಕಳನ್ನು ಅದರ ಮೇಲೆ ಕೂರಿಸಿ ಆಡಿಸುತ್ತಿದ್ದ. ಕುದುರೆ ಮೇಲೆ ಸವಾರಿ ಮಾಡಲು ಸುಹೇಲುಲ್ಲಾ ಷರೀಫ್ ಬಂದಿದ್ದಾಗ, ದೊಡ್ಡವರನ್ನೆಲ್ಲ ಕುದುರೆ ಮೇಲೆ ಕೂರಿಸುವುದಿಲ್ಲ ಎಂದು ಹೇಳಿದ್ದ. ಆಗ ಆತ ಬಾಲಕನ ಕೆನ್ನೆಗೆ ಹೊಡೆದು ಹೋಗಿದ್ದ.


ಕೆಲ ದಿನಗಳ ಬಳಿಕ ಹೊಟೇಲೊಂದರ ಬಳಿ ಷರೀಫ್​ನನ್ನು ನೋಡಿದ್ದ ಬಾಲಕ ಸತೀಶ್ ಮತ್ತು ಸ್ನೇಹಿತರು, ಷರೀಫ್ ಮೇಲೆ ಹಲ್ಲೆ ಮಾಡಿದ್ದರು. ಈ ಹಲ್ಲೆಗೆ ಪ್ರತಿಕಾರವಾಗಿ ಸತೀಶ್ ಕೊಲೆಗೆ ಈ ಷರೀಫ್ ಸಂಚು ಹೂಡಿದ್ದ. ಏಪ್ರಿಲ್ 3ರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಸತೀಶ್​ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿದ್ದರು. ಸುಮಾರು 60 ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲಾಗಿದೆ ಎಂದು ತಿಳಿಸಿದರು.