ಕುದುರೆಗಳಿಂದ ಬೆಳೆಹಾನಿ: ಕ್ರಮಕ್ಕೆ ಆಗ್ರಹ

ಲಕ್ಷ್ಮೇಶ್ವರ, ಡಿ 27- ಪಟ್ಟಣದ ಸುತ್ತಮುತ್ತಲಿನ ಜಮೀನುಗಳಲ್ಲಿ ಜೋಳ, ಕಡಲೆ, ಗೋಧಿ ಬೆಳೆಗಳನ್ನು ವಾರಸುದಾರರು ಇಲ್ಲದ ಕುದುರೆಗಳು ಬೆಳೆಗಳನ್ನು ತಿಂದು ಹಾಳು ಮಾಡುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಬೆಳೆಗಾವಿ ಜಿಲ್ಲೆಯ ರಾಯಬಾಗ, ಚಿಕ್ಕೋಡಿ, ಯಕ್ಸಂಬಾ, ಗೋಕಾಕ ಮತ್ತಿತರರ ಪ್ರದೇಶಗಳಿಂದ ಬಂದಿರುವ ಕುರಿಗಾಹಿಗಳು ಕುರಿ, ಆಡುಗಳೊಂದಿಗೆ ಕುದುರೆಯ ಮೇಲೆ ವಜನ ಹೇರಿಕೊಂಡು ರೈತರ ಹೊಲ ಗದ್ದೆಗಳಲ್ಲಿ ಬೀಡು ಬಿಟ್ಟು ಕೆಲ ದಿನಗಳ ನಂತರ ಅಲ್ಲಿಂದ ವಲಸೆ ಹೋಗುವಾಗ ಕುದುರೆಗಳನ್ನು ಬಿಟ್ಟು ಹೋಗುತ್ತಿರುವುದರಿಂದ ಅವು ಈಗ ರೈತರ ಪಾಲಿಗೆ ಉರುಳಾಗಿದೆ.
ರೈತ ರಮೇಶ್ ಜಲ್ಲಿಗೇರಿ ಅವರ ಹೊಲದಲ್ಲಿ ಬೆಳೆದು ನಿಂತಿ ಜೋಳದ ಬೆಳೆಯನ್ನು ಹತ್ತಾರು ಕುದುರೆಗಳು ಮೇದು ಹಾಳು ಮಾಡುತ್ತಿವೆ. ಕುದುರೆಗಳುನ್ನು ಎಷ್ಟೇ ಓಡಿಸಿದರು ನಿಶ್ಯಬ್ದ ಆಗುತ್ತಿದ್ದಂತೆಯೇ ಮತ್ತೆ ಜಮೀನುಗಳಲ್ಲಿ ನುಗ್ಗಿ ಬೆಳೆಗಳನ್ನು ಹಾಳು ಮಾಡುತ್ತಿದ್ದು ವಾರಸುದಾರರು ಇಲ್ಲದ ಈ ಕುದುರೆಗಳನ್ನು ಪುರಸಭೆಯವರು ಕೂಡಿ ಹಾಕಿ ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.