ಕುತೂಹಲಕ್ಕೆ ಕಾರಣವಾದ ಪ್ರಾಚೀನ ದೇವಸ್ಥಾನದ ಶಿಲಾಶಾಸನ

ಬೈಲಹೊಂಗಲ,ಆ12: ತಾಲೂಕಿನ ನೇಸರಗಿ ಗ್ರಾಮದಲ್ಲಿರುವ ಐತಿಹಾಸಿಕ 12 ನೇ ಶತಮಾನದ ಜೋಡುಗುಡಿ ಬಸವೇಶ್ವರ ದೇವಸ್ಥಾನದಿಂದ ಜಿಲ್ಲಾಡಳಿತವು ಈ ಹಿಂದೆ ತೆಗೆದುಕೊಂಡು ಹೋಗಿದ್ದ ಶಿಲಾಶಾಸನವನ್ನು ಮರಳಿ ದೇವಸ್ಥಾನ ಬಳಿ ತಂದು ಇಟ್ಟು ಹೋಗಿರುವುದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.
ಜಿಲ್ಲಾಡಳಿತ ಸಂಶೋಧನೆ ನೆಪದಲ್ಲಿ 19-1-2007 ರಂದು ಇಲ್ಲಿಯ ಜೋಡುಗುಡಿ ದೇವಸ್ಥಾನದಲ್ಲಿದ್ದ ಹಲೆಯ ಶಿಲಾಶಾಸನವನ್ನು ತೆಗೆದುಕೊಂಡು ಹೋಗಿತ್ತು. ಆದರೆ ಇಲ್ಲಿಯವರೆಗೆ ಈ ಶಿಲಾಶಾಸನವನ್ನು ಎಲ್ಲಿ ತೆಗದುಕೊಂಡು ಹೋಗಲಾಗಿದೆ ಎಂಬುದು ನಿಗೂಡವಾಗಿತ್ತು. ಆದರೆ ಕಳೆದೆರಡು ದಿನಗಳ ಹಿಂದೆ ಧಾರವಾಡದಲ್ಲಿರುವ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು ಶಿಲಾಶಾಸನವನ್ನು ಚೀಲದಲ್ಲಿ ಕಟ್ಟಿಕೊಂಡು ಮರಳಿ ಇಲ್ಲಿಗೆ ತಂದು ಇಟ್ಟುಹೋಗಿದ್ದಾರೆ.
ಆದರೆ ಮರಳಿ ತಂದು ಇಲ್ಲಿ ಶಿಲಾಶಾನವನ್ನು ತಂದು ಇಟ್ಟುಹೋಗಿದ್ದರೂ ಸಾರ್ವಜನಿಕರಿಗೆ ಇದರ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ ದೇವಸ್ಥಾನದ ಬಳಿ ಪ್ರಾಚ್ಯ ವಸ್ತು ಇಲಾಖೆಯ ಸಂರಕ್ಷಿತ ಸ್ಮಾರಣವೆಂಬ ನಾಮಫಲಕವನ್ನು ನೆಟ್ಟು ಹೋಗಲಾಗಿದೆ. 1958 ರಪ್ರಕಾರ ಈ ಸ್ಮಾರಕವನ್ನು ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಘೋಷಿಸಲಾಗಿದೆ ಎಂಬ ವಿವರಣೆಯೊಂದಿಗೆ ಮತ್ತಿತರ ವಿಷಯದ ಫಲಕವನ್ನು ನೆಡಲಾಗಿದೆ.
ಈ ಕುರಿತು ಧಾರವಾಡದ ಪ್ರಾಚ್ಯ ವಸ್ತು ಇಲಾಖೆಯ ಸಹಾಯಕ ಅಧೀಕ್ಷಕರಾದ ಡಾ.ಎಚ್.ಆರ್.ದೇಸಾಯಿಯವರನ್ನು ಪತ್ರಿಕೆಯು ಸಂಪರ್ಕಿಸಿದಾಗ ಮಾತನಾಡಿ, ದೇವಸ್ಥಾನ ರೀಪೇರಿ ಮಾಡಿ ಪುನಶ್ಚೇತನಗೊಳಿಸಲಾಗುವುದು. ಬದಾಮಿ, ಪಟ್ಟದಕಲ್ಲು ದೇವಸ್ಥಾನ ರಕ್ಷಣೆ ಮಾಡಲಾದ ರೀತಿಯಲ್ಲಿ ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸಲಾಗುವುದು. ಲೀಕೇಜು, ಕ್ರ್ಯಾಕ್ ಇದ್ದದ್ದನ್ನು ಸರಿಪಡಿಸಲಾಗುವುದು. ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
ಬಿದ್ದು ಹೋಗುತ್ತಿರುವ ಶಿಲ್ಪಕಲಾಕೃತಿಗಳನ್ನು ಮತ್ತೆ ಒಂದುಗೂಡಿಸಿ ದೇವಾಲಯ ಪುನರ್ ನಿರ್ಮಿಸಿ ಜೋಡುಗುಡಿಯ ಪ್ರಾಚೀನ ಗತವೈಭವನ್ನು ಮತ್ತೆ ಮರುಕಳಿಸುವ ಕಾರ್ಯವನ್ನು ಸರಕಾರ ಮುಂದಾಗಿ ಮಾಡಬೇಕಿದೆ ಎಂದು ನಾಗರಿಕರಾದ ಸುರೇಶ ನಾವಲಗಟ್ಟಿ, ಸುರೇಶ ಹಂಪನ್ನವರ, ಮತ್ತಿತರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.