ಕುತಂತ್ರಿಗಳಿಂದ ನಕಲಿ ಪತ್ರ: ಸಿದ್ದು ಗರಂ

ಬೆಂಗಳೂರು, ಮೇ ೯- ರಾಜ್ಯ ಕಾಂಗ್ರೆಸ್‌ನಲ್ಲಿ ನಡೆದಿರುವ ವಿದ್ಯಮಾನಗಳ ಬಗ್ಗೆಯಾಗಲೀ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ನಾನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಯಾವುದೇ ಪತ್ರ ಬರೆದಿಲ್ಲ. ಕೆಲವು ಕುತಂತ್ರಿಗಳು ನನ್ನ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಈ ನಕಲಿ ಪತ್ರ ಸೃಷ್ಠಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಎಐಸಿಸಿ ಅಧ್ಯಕ್ಷರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ವಿರುದ್ಧ ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಬೆಂಗಳೂರಿನಲ್ಲಿಂದು ಪ್ರತಿಕ್ರಿಯೆ ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಈ ಪತ್ರ ನಾನು ಬರೆದಿಲ್ಲ. ಇದು ನಕಲಿ ಎಂದರು.
ಈ ನಕಲಿ ಪತ್ರವನ್ನು ಆರ್‌ಎಸ್‌ಎಸ್‌ನವರು ಬರೆದು ಕುತಂತ್ರ ನಡೆಸಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಅವರು, ಈ ಪತ್ರ ಯಾರು ಬರೆದಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡುವುದಾಗಿಯೂ ಹೇಳಿದರು.
ಈ ಪತ್ರದ ಹಿಂದೆ ಯಾರಿದ್ದಾರೆ, ಇದರಲ್ಲಿ ಯಾರ ಕೈವಾಡವಿದೆ ಎಂಬುದರ ಬಗ್ಗೆ ಪೊಲೀಸರ ತನಿಖೆಯಿಂದ ಸತ್ಯ ಹೊರ ಬರುತ್ತದೆ ಎಂದು ಹೇಳಿದ ಅವರು, ಈ ನಕಲಿ ಪತ್ರದ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡುತ್ತೇನೆ ಎಂದು ಹೇಳಿದರು.