ಕುಣಿದು ಕುಪ್ಪಳಿಸಿದ ಸರ್ಕಾರಿ ನೌಕರರು

ಬೀದರ್:ಮಾ.8: ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟದ ನಿಮಿತ್ತ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಸಂಗೀತ ಹಾಗೂ ಹಾಸ್ಯ ಕಾರ್ಯಕ್ರಮದಲ್ಲಿ ನೌಕರರು ಕುಣಿದು ಕುಪ್ಪಳಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ನೌಕರರು ವೇದಿಕೆಯಲ್ಲಿ ಸಂಗೀತದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಗಮನ ಸೆಳೆದರು.
ಕಲಾವಿದ ನಾಗರಾಜ ಜೋಗಿ ಸಂಗೀತದ ಸವಿ ಉಣಬಡಿಸಿದರೆ, ಕಲಾವಿದ ನವಲಿಂಗ ಪಾಟೀಲ ಹಾಸ್ಯದ ಹೊನಲು ಹರಿಸಿದರು.
ಸಂಗೀತ, ಹಾಸ್ಯದಿಂದ ಉಲ್ಲಾಸ: ಸಂಗೀತ ಹಾಗೂ ಹಾಸ್ಯ ನೌಕರರು ಉಲ್ಲಾಸದಿಂದ ಕರ್ತವ್ಯ ನಿರ್ವಹಿಸಲು ನೆರವಾಗುತ್ತವೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ ಹೇಳಿದರು.
ಒತ್ತಡದಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ಸಂಗೀತ ಹಾಗೂ ಹಾಸ್ಯ ಮಾನಸಿಕ ವ್ಯಾಯಾಮ ಇದ್ದಂತೆ ಎಂದರು.
ರಾಜೇಂದ್ರಕುಮಾರ ಗಂದಗೆ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಶಾಂತಕುಮಾರ ರಾಠೋಡ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗೌತಮ ಅರಳಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಕಾರ್ಯಾಧ್ಯಕ್ಷ ಡಾ. ರಾಜಕುಮಾರ ಹೊಸದೊಡ್ಡೆ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಸಹ ಕಾರ್ಯದರ್ಶಿ ಮನೋಹರ ಕಾಶಿ, ಬಕ್ಕಪ್ಪ ನಿರ್ಣಾಕರ, ಓಂಕಾರ ಮಲ್ಲಿಗೆ, ಡಾ. ವೈಶಾಲಿ, ರೂಪಾದೇವಿ, ಸಂಜೀವಕುಮಾರ ಸೂರ್ಯವಂಶಿ, ಉಮೇಶ ಪಾಟೀಲ ಮೊದಲಾದವರು ಇದ್ದರು.