ಕುಣಿಗಲ್‌ನಲ್ಲಿ ನಾಗರಿಕರ ಕೊರೊನಾ ಪರೀಕ್ಷೆ

ಕುಣಿಗಲ್, ಏ. ೨೦- ಕೋವಿಡ್ ೨ನೇ ಅಲೆಯ ಹೊಸ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದ್ದು, ಈ ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ತಾಲ್ಲೂಕು ಆಡಳಿತ ಬಿಗಿ ಕ್ರಮ ಕೈಗೊಂಡಿದ್ದು, ತಹಶೀಲ್ದಾರ್ ಕಲ್ಯಾಣಿ ಕಾಂಬ್ಳೆ, ಪುರಸಭಾಧ್ಯಕ್ಷ ಎಸ್.ಕೆ. ನಾಗೇಂದ್ರ ನೇತೃತ್ವದಲ್ಲಿ ಪಟ್ಟಣದಾದ್ಯಂತ ಸಾರ್ವಜನಿಕರ ಗಂಟಲು ದ್ರವ ಪರೀಕ್ಷೆ ಮಾಡಲಾಯಿತು.
ಪಟ್ಟಣದ ಖಾಸಗಿ ಬಸ್ ನಿಲ್ದಾಣ, ಹೋಟೆಲ್ ಪರಿಮಳ, ರೈಲ್ವೆ, ಆಶ್ರಯ ಕಾಲೋನಿ, ಅಂಬೇಡ್ಕರ್ ಕಾಲೋನಿ, ಅಗ್ರಹಾರ, ದೊಡ್ಡಪೇಟೆ, ಉಪ್ಪಾರ ಬೀದಿ ಸೇರಿದಂತೆ ಹಲವಾರು ಕಡೆ ಹಾಗೂ ತಾಲ್ಲೂಕಿನ ಎಡೆಯೂರು, ಅಮೃತೂರು, ಹುತ್ರಿದುರ್ಗ, ಹುಲಿಯೂರುದುರ್ಗ, ಕೊತ್ತಗೆರೆ ಸೇರಿದಂತೆ ಎಲ್ಲ ಹೋಬಳಿಗಳಲ್ಲಿಯೂ ಹೊಸ ಪ್ರಕರಣಗಳು ದಾಖಲಾಗಿದ್ದು, ಇದುವರೆಗೂ ೧೭೦೦ಕ್ಕೂ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಕೋವಿಡ್ ಎರಡನೇ ಅಲೆ ಇದ್ದಕ್ಕಿದ್ದಂತೆ ದಿನೇ ದಿನೇ ಹೆಚ್ಚುತ್ತಿದೆ. ಮದುವೆ, ಬೀಗರ ಔತಣ ಕೂಟ ಕಾರ್ಯಕ್ಕಾಗಿ ಕಲ್ಯಾಣ ಮಂಟಪಗಳು ಹಾಗೂ ಇತರೆ ಸಮಾರಂಭಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರು ಹಾಗೂ ಇತರ ಕಡೆಯಿಂದ ಎಗ್ಗಿಲ್ಲದೆ ಯಾವುದೇ ಸುರಕ್ಷತಾ ಕ್ರಮ ವಹಿಸದೆ ಬಂದು ಹೋಗುತ್ತಿರುವುದು ಹಾಗೂ ಕೆಲವರು ತಮಗೆ ಕೊರೊನಾ ಸೋಂಕು ತಗುಲುವುದಿಲ್ಲವೆಂದೂ ಉಡಾಫೆಯಿಂದ ಇರುವುದು ಕೊರೊನಾ ಸೋಂಕಿನ ಹೊಸ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕಾರಣವಾಗಿದೆ.
ಲಸಿಕೆ ಹಾಕಿಸಿಕೊಳ್ಳುವ ಮೂಲಕ ರೋಗವನ್ನು ಹತೋಟಿಗೆ ತರಲು ಮಾಸ್ಕ್, ಸ್ಯಾನಿಟೈಸರ್, ಪರಸ್ಪರ ಅಂತರ ಕಾಯ್ದುಕೊಳ್ಳುವ ಮೂಲಕ ರೋಗವನ್ನು ಹತೋಟಿಗೆ ತರಲು ಸಹಕರಿಸುವಂತೆ ಮನವಿ ಮಾಡಿ ಪಟ್ಟಣದ ಹಲವು ಕಡೆ ಕೋವಿಡ್ ಗಂಟಲು ದ್ರವ ಪರೀಕ್ಷೆ ಕೈಗೊಳ್ಳುವ ಮೂಲಕ ರೋಗವನ್ನು ಪತ್ತೆಹಚ್ಚಿ ಜನರಲ್ಲಿ ಅರಿವು ಮತ್ತು ಜಾಗೃತಿಯನ್ನುಂಟು ಮಾಡುತ್ತಿದ್ದಾರೆ. ಯಾವುದೇ ಜಾತ್ರೆ, ಸಮಾರಂಭ, ಮದುವೆ ಇತ್ಯಾದಿಗಳಿಗೆ ಸರ್ಕಾರ ನಿಗದಿಪಡಿಸಿರುವ ಜನಕ್ಕಿಂತ ಹೆಚ್ಚಿಗೆ ಸೇರಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಿ ಜಾಗೃತಿ ಮೂಡಿಸುವಂತಹ ಕೆಲಸವನ್ನು ತಾಲ್ಲೂಕು ಆಡಳಿತ, ಪುರಸಭೆ ಕೈಗೊಂಡಿದೆ. ಜನಸಂದಣಿ ಸೇರುವ ಈ ಭಯಾನಕ ಕೊರೊನಾ ಮಹಾಮಾರಿಯೂ ವಿಶ್ವದಾದ್ಯಂತ ಲಕ್ಷಾಂತರ ಮಂದಿಯನ್ನು ಬಲಿ ತೆಗೆದುಕೊಂಡಿದ್ದು, ಇದನ್ನು ಓಡಿಸಲು ಒಗ್ಗಟ್ಟಿನಿಂದ ಎಲ್ಲರ ಸಹಕಾರ ಮುಖ್ಯವಾಗಿದ್ದು, ಮುಂಜಾಗ್ರತೆಯಾಗಿ ಅಗತ್ಯ ಸುರಕ್ಷತಾ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ೪೫ ವರ್ಷ ಮೇಲ್ಪಟ್ಟವರು ಎಲ್ಲಾ ನಾಗರಿಕರು ಲಸಿಕೆ ಪಡೆಯುವ ಮೂಲಕ ರೋಗವನ್ನು ಮುಕ್ತಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ. ಜಗದೀಶ್, ಪುರಸಭಾ ಮುಖ್ಯಾಧಿಕಾರಿ ರವಿಕುಮಾರ್, ಪರಿಸರ ಇಂಜಿನಿಯರ್ ಚಂದ್ರಶೇಖರ್, ಆರೋಗ್ಯ ನಿರೀಕ್ಷಕಿ ಮಮತಾ ಮತ್ತಿತರರು ಉಪಸ್ಥಿತರಿದ್ದರು.