
ಕಲಬುರಗಿ.ಏ.08: ರಾಜ್ಯ ಸರ್ಕಾರವು ಕುಡು ಒಕ್ಕಲಿಗ ಸಮುದಾಯವನ್ನು 2ಡಿಗೆ ಸೇರಿಸಿದ್ದು ಸ್ವಾಗತಾರ್ಹ. ಆದಾಗ್ಯೂ, 2ಸಿಯಲ್ಲಿ ಕೇವಲ ಕಡಿಮೆ ಸಮುದಾಯಗಳು ಇರುವುದರಿಂದ ಆ ಪ್ರವರ್ಗದಲ್ಲಿ ಕುಡು ಒಕ್ಕಲಿಗ ಸಮುದಾಯವನ್ನು ಸೇರಿಸಬೇಕು ಎಂದು ಕರ್ನಾಟಕ ರಾಜ್ಯ ಕುಡು ಒಕ್ಕಲಿಗ ಅಭಿವೃದ್ಧಿ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವರಾಜ್ ಪಾಟೀಲ್ ಕಲಗುರ್ತಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಸಮ್ಮತ ಮೀಸಲಾತಿ ಸಿಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಸರ್ಕಾರ ಈಗಾಗಲೇ 2ಡಿಯಲ್ಲಿ ನಮ್ಮನ್ನು ಸೇರಿಸಿದೆ. ಎಲ್ಲ ಆಯೋಗಗಳು ನಮ್ಮ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ 3ಎ ನೀಡಬೇಕು ಎಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಆದಾಗ್ಯೂ, ನಾವು 2ಸಿಯಲ್ಲಿ ಕೇವಲ ಕಡಿಮೆ ಸಮುದಾಯಗಳು ಇರುವುದರಿಂದ ಆ ಪಟ್ಟಿಗೆ ಸೇರಿಸಲು ಕೋರಿದ್ದೇವೆ. ಆದ್ದರಿಂದ ಬೇಡಿಕೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯದಲ್ಲಿ ಕುಡು ಒಕ್ಕಲಿಗ ಸಮುದಾಯವು 20ರಿಂದ 21 ಲಕ್ಷ ಜನಸಂಖ್ಯೆ ಹೊಂದಿದೆ. ಹಲವಾರು ದಶಕಗಳಿಂದ ಮಾಡುತ್ತಿರುವ ಹೋರಾಟಕ್ಕೆ ಸ್ಪಂದಿಸಿ ರಾಜ್ಯ ಸರ್ಕಾರವು 2ಸಿಗೆ ನಮ್ಮ ಸಮುದಾಯವನ್ನು ಸೇರಿಸಬೇಕು ಎಂದು ಅವರು ಒತ್ತಾಯಿಸಿದರು.
ಹೋರಾಟವನ್ನು ಪರಿಗಣಿಸಿ ಕುಡು ಒಕ್ಕಲಿಗ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವುದು ಸ್ವಾಗತಾರ್ಹ. ಅದರಂತೆ ಸಮಾನಾಂತರ ಜಾತಿಗಳು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಮತ್ತು 2ಸಿ (ಹಳೆಯ 3ಎ)ಯಲ್ಲಿ ಸೇರಿಸಿ ನಮಗೆ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ಅವರು ಆಗ್ರಹಿಸಿದರು.
ನಮ್ಮ ಬೇಡಿಕೆಗೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳೆಲ್ಲವೂ ಸ್ಪಂದಿಸಿದ್ದು, ಎಲ್ಲರಿಗೂ ಅಭಿನಂದಿಸುವುದಾಗಿ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಾ. ಶಿವಪುತ್ರಪ್ಪ ಬೆಡಜೇರಗಿ, ಚಂದ್ರಕಾಂತ್ ಎಸ್. ಮಾಲಿಪಾಟೀಲ್ ಬೀದರ್, ಮಲ್ಲಣಗೌಡ ಬಿ. ಪಾಟೀಲ್ ಮಳ್ಳಿ, ಭೀಮಶ್ಯಾ ಜಿರೋಳಿ, ಬಸವರಾಜ್ ಬಿ. ಸರಡಗಿ, ಗುರುನಾಥ್ ಬಿ. ದೇಸಾಯಿ, ಕಲ್ಯಾಣರಾವ್ ಗಾಣೂರೆ, ಅಣ್ಣಾರಾವ್ ಪಾಟೀಲ್ ಗಾಣಗಾಪೂರ್, ಶಾಂತಕುಮಾರ್ ಬೆಳಮ್, ನಾಗಣ್ಣ ಬಿ. ಪಾಟೀಲ್ ಶಂಕರವಾಡಿ, ಶಿವಯೋಗೆಪ್ಪ ಜಿ. ಚಿತ್ತಾಪೂರ್, ಕರಸಬಸಪ್ಪ ಎಸ್. ಮಸರಗೊಂಡ್, ಮಲ್ಲಣಗೌಡ ಪಾಟೀಲ್ ಬೋಳೆವಾಡ್, ಶರಣಗೌಡ ಬಿ. ಕೊಡದೂರ್ ಮುಂತಾದವರು ಉಪಸ್ಥಿತರಿದ್ದರು.